ಬೆಂಗಳೂರು: ಸೂರಜ್ ರೇವಣ್ಣ ವಿರುದ್ಧ ಕೇಳಿಬರುತ್ತಿರುವ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಸೂರಜ್ ರೇವಣ್ಣ ವಿರುದ್ಧ ಕೇಳಿ ಬರುತ್ತಿರುವ ಆರೋಪ ವಿಚಾರವಾಗಿ ಇನ್ನೂ ಯಾರ ಕಡೆಯಿಂದಲೂ ದೂರು ಬಂದಿಲ್ಲ. ಟಿವಿಯಲ್ಲಿ ಬಂದಿದೆ. ಖಾಸಗಿ ವಾಹಿನಿ ಅವರ ಹತ್ತಿರ ಕೇಳ್ತಿದ್ದೇವೆ. ನಮಗೆ ಅಧಿಕೃತ ದೂರು ನೀಡಿಲ್ಲ. ದೂರು ಬಂದ ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ ಅಂತ ಹೇಳಿದ್ದಾರೆ. ನನಗೆ ಯಾವುದೇ ಪತ್ರ ಬಂದಿಲ್ಲ. ಈಗ ತನಿಖೆ ಮಾಡುತ್ತೇವೆ. ಏನು ಅಂತ ತಿಳಿದುಕೊಂಡು ನಾವು ತನಿಖೆ ಮಾಡುತ್ತೇವೆ. ಸಿಐಡಿಗೆ ಕೊಡುವ ಮುನ್ನ ನೈಜತೆ ತಿಳಿದುಕೊಳ್ಳುತ್ತೇವೆ. ಪತ್ರ ಬರೆಯುವುದಕ್ಕೂ, ದೂರು ಕೊಡುವುದಕ್ಕೆ ವ್ಯತ್ಯಾಸ ಇದೆ. ಅಧಿಕೃತ ದೂರು ಬಂದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಖಾಸಗಿ ವಾಹಿನಿ ಅವರನ್ನು ಕರೆದು ಮಾತನಾಡುತ್ತೇವೆ ಎಂದರು.
ಬಿಜೆಪಿ ವಿರುದ್ಧ ಗರಂ: ಬಿಜೆಪಿಗರು ಹೇಗೆ ಆರ್ಥಿಕ ವ್ಯವಸ್ಥೆ ಇಟ್ಟಿದ್ರು ಗೊತ್ತಿದೆ. ನಾವು ಬಂದಾಗ ಯಾವ ಪರಿಸ್ಥಿತಿ ಇಟ್ಟಿದ್ದರು ಅಂತಾನೂ ಗೊತ್ತಿದೆ. ಬಿಜೆಪಿಗರು ಗ್ಯಾರಂಟಿ ತೆಗೆದುಕೊಳ್ಳುತ್ತಿಲ್ವಾ?. ಆರ್ಥಿಕ ಸ್ಥಿತಿ ಸರಿ ಇಡುವ ಬಗ್ಗೆ ಖಾಸಗಿ ಸಂಸ್ಥೆಯಿಂದ ಸಲಹೆ ಪಡೆಯುತ್ತಿದ್ದೇವೆ. ರಾಜ್ಯದ ಅಭಿವೃದ್ಧಿ ವಿಚಾರವಾಗಿ ಸಲಹೆ ಪಡೆಯುತ್ತಿದ್ದೇವೆ. ಬಿಜೆಪಿಗರಿಗೆ ಹೊಟ್ಟೆ ಉರಿ ಬಿಡ್ರಿ ಎಂದು ವಾಗ್ದಾಳಿ ನಡೆಸಿದರು.
ಓದಿ: ದರ್ಶನ್ ಸೇರಿ ನಾಲ್ವರ ಪೊಲೀಸ್ ಕಸ್ಟಡಿ ಇಂದು ಅಂತ್ಯ: ನ್ಯಾಯಾಂಗ ಬಂಧನ ಸಾಧ್ಯತೆ - Darshan Police custody