ಬೆಳಗಾವಿ: ಇದು ಉತ್ತರ ಕರ್ನಾಟಕದ ಶಕ್ತಿಕೇಂದ್ರ ಸುವರ್ಣ ವಿಧಾನಸೌಧಕ್ಕೆ ಜಾಗ ಕೊಟ್ಟ ಊರು. ಇಡೀ ರಾಜ್ಯದ ಸಮಸ್ಯೆಗಳೇ ಅಲ್ಲಿ ಚರ್ಚೆಯಾಗುತ್ತವೆ. ಆದರೆ, ಊರಿನ ಮಕ್ಕಳ ಸಮಸ್ಯೆ ಕೇಳುವವರು ಯಾರೂ ಇಲ್ಲ. ಪ್ರೌಢಶಾಲಾ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಬೇರೆ ಊರಿನ ಶಾಲೆಗಳನ್ನೇ ಅವಲಂಬಿಸಬೇಕಿದೆ. ಕುಡಿಯುವ ನೀರು, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಮತ್ತಿತರ ಸಮಸ್ಯೆಗಳು ಇಲ್ಲಿ ಹೇರಳ.
ತಾಲೂಕಿನ ಬಸ್ತವಾಡ ಗ್ರಾಮದ ಮಕ್ಕಳ ಶೈಕ್ಷಣಿಕ ಸಮಸ್ಯೆಯ ಗೋಳಿನ ಕಥೆ ಇದು. ಸುಮಾರು 7 ಸಾವಿರ ಜನಸಂಖ್ಯೆ ಹೊಂದಿರುವ ಇಲ್ಲಿ ಕೇವಲ 7ನೇ ತರಗತಿವರೆಗೆ ಮಾತ್ರ ಸರ್ಕಾರಿ ಶಾಲೆ ಇದೆ. ವಿದ್ಯಾರ್ಥಿಗಳು ಪ್ರೌಢಶಾಲಾ ಶಿಕ್ಷಣಕ್ಕೆ ಪಕ್ಕದ ಊರುಗಳಿಗೆ ಹೋಗುವ ಅನಿವಾರ್ಯತೆ ಇದೆ.
ಬಸ್ತವಾಡ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿವರೆಗೆ 307 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರೆ, ಮರಾಠಿ ಶಾಲೆಯಲ್ಲಿ 160 ಮಕ್ಕಳು ಕಲಿಯುತ್ತಿದ್ದಾರೆ. ಮುಂದಿನ ಶಿಕ್ಷಣಕ್ಕೆ ಇವರೆಲ್ಲಾ 2 ಕಿ.ಮೀ ಅಂತರದಲ್ಲಿರುವ ಹಲಗಾ, 10 ಕಿ.ಮೀ ಕ್ರಮಿಸಿ ಕೆ.ಕೆ.ಕೊಪ್ಪ, 8 ಕಿ.ಮೀ ದೂರದ ಮಾಸ್ತಮರಡಿ, ಇಲ್ಲವಾದರೆ 12 ಕಿ.ಮೀ ಪ್ರಯಾಣಿಸಿ ಬೆಳಗಾವಿಗೆ ಹೋಗಬೇಕು.
"ಈಗ ಚಳಿಗಾಲದ ಅಧಿವೇಶನ ಶುರುವಾಗಿದೆ. ನಾಡಿನ ದೊರೆ ಸೌಧಕ್ಕೆ ಬಂದು ರಾಜ್ಯದ ಪ್ರಮುಖ ಸಮಸ್ಯೆಗಳನ್ನು ಹೊತ್ತು ತರುವ ಶಾಸಕರಿಗೆ ಸ್ಪಂದಿಸುತ್ತಾರೆ. ಆದರೆ, ಸೌಧದ ಅಣತಿ ದೂರದಲ್ಲಿರುವ ನಮ್ಮೂರಿನ ಸಮಸ್ಯೆಗಳ ಬಗ್ಗೆಯೂ ತಮ್ಮ ಚಿತ್ತ ಹರಿಸಲಿ. ಇಲ್ಲಿಗೆ ಬಂದು ನಮ್ಮ ಅಳಲನ್ನು ಆಲಿಸಲಿ" ಎಂದು ಗ್ರಾಮಸ್ಥರು ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುತ್ತಿದ್ದಾರೆ.
ಈಟಿವಿ ಭಾರತದ ಜೊತೆಗೆ ಮಾತನಾಡಿದ ಎಸ್ಡಿಎಂಸಿ ಅಧ್ಯಕ್ಷ ಶ್ರೇಯಾಂಸ ಕಮಾಲ, "ನಮಗೆ ಹೈಸ್ಕೂಲ್ ಇಲ್ಲ. 7ನೇ ತರಗತಿ ಮುಗಿಸಿ 8ನೇ ತರಗತಿಗೆ ಬೆಳಗಾವಿಗೆ ಹೋಗಬೇಕು. ಈಗಾಗಲೇ ಈ ಬಗ್ಗೆ ಎರಡು ಬಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮನವಿ ಸಲ್ಲಿಸಿ ಬೇಡಿಕೆ ಇಟ್ಟಿದ್ದೇವೆ. ಹಲಗಾದಲ್ಲಿ ಇರುವುದು ಖಾಸಗಿ ಅನುದಾನಿತ ಶಾಲೆ. ಸರ್ಕಾರಿ ಶಾಲೆಗೆ ಹೋಗಬೇಕು ಎಂದರೆ ಮಾಸ್ತಮರಡಿ ಇಲ್ಲವೇ ಕೆ.ಕೆ.ಕೊಪ್ಪಕ್ಕೆ ತೆರಳಬೇಕಿದೆ ಅಥವಾ 12 ಕಿ.ಮೀ ಅಂತರದ ಬೆಳಗಾವಿಗೆ ಹೋಗಬೇಕು" ಎಂದರು.
"ನಮ್ಮೂರಲ್ಲಿ ದುಡಿದು ತಿನ್ನುವ ಬಡ, ಮಧ್ಯಮ ವರ್ಗದ ಜನರೇ ಹೆಚ್ಚು. ಹಾಗಾಗಿ, ಬಂದ್ ಆಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಪುನಃ ಆರಂಭಿಸಿದರೆ ಬಹಳಷ್ಟು ಅನುಕೂಲ ಆಗುತ್ತದೆ. ನಮ್ಮ ಈ ಬೇಡಿಕೆಗಳನ್ನು ಈಡೇರಿಸುವಂತೆ ಶಿಕ್ಷಣ ಸಚಿವರು ಮತ್ತು ಆರೋಗ್ಯ ಸಚಿವರನ್ನು ಭೇಟಿಯಾಗುತ್ತೇವೆ" ಎಂದು ಅವರು ಹೇಳಿದರು.
"ಸುವರ್ಣ ವಿಧಾನಸೌಧ ನಿರ್ಮಾಣಕ್ಕೆ ಭೂಮಿ ಕೊಟ್ಟ ರೈತರ ಮನೆಯ ಒಬ್ಬರಿಗೆ ಸರ್ಕಾರಿ ನೌಕರಿ ಕೊಡುತ್ತೇವೆ ಎಂದು ಸರ್ಕಾರ ಭರವಸೆ ನೀಡಿತ್ತು. ಅಲ್ಲದೇ ಸೌಧಕ್ಕೆ ಹಿಡಕಲ್ ಜಲಾಶಯದಿಂದ ತೆಗೆದುಕೊಂಡು ಬಂದಿರುವ ಕುಡಿಯುವ ನೀರನ್ನು ಹಲಗಾ ಮತ್ತು ಬಸ್ತವಾಡ ಗ್ರಾಮಕ್ಕೂ ಪೂರೈಸುವುದಾಗಿ ಹೇಳಿದ್ದರು. ಆದರೆ, ಇವೆರಡೂ ಬೇಡಿಕೆ ಈಡೇರಿಲ್ಲ" ಎಂದು ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದರು.
ಸಹ ಶಿಕ್ಷಕಿ ಶೀಲಾ ಪಾಟೀಲ ಮಾತನಾಡಿ, "7ನೇ ತರಗತಿಯಲ್ಲಿ 53 ಮಕ್ಕಳು ಓದುತ್ತಿದ್ದಾರೆ. ಇವರು ಹೈಸ್ಕೂಲ್ ಕಲಿಯಲು ಹಲಗಾ ಇಲ್ಲವೇ ಬೆಳಗಾವಿಗೆ ಹೋಗಬೇಕು. ಹಾಗಾಗಿ, ಬಸ್ತವಾಡದಲ್ಲಿಯೇ ಹೈಸ್ಕೂಲ್ ಆರಂಭಿಸಿದರೆ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ಆಗುತ್ತದೆ" ಎಂದು ತಿಳಿಸಿದರು.
ಇದನ್ನೂ ಓದಿ: ಎರಡು ದಿನಗಳಲ್ಲಿ ಗಡಿ ಕನ್ನಡ ಶಾಲೆಗಳಿಗೆ ಭೇಟಿ ನೀಡುವೆ: ಮಧು ಬಂಗಾರಪ್ಪ