ಹುಬ್ಬಳ್ಳಿ : ನನ್ನ ಮಗಳಾದ ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಿದ ಮೇಲೆ ನಾನು ಸಿಐಡಿ ತನಿಖಾ ತಂಡವನ್ನು ಭೇಟಿಯಾಗಲು ಆಗಿರಲಿಲ್ಲ. ಸಿಐಡಿಗೆ ಕೆಲ ಮಾಹಿತಿ ನೀಡಬೇಕಿತ್ತು. ತನಿಖೆ ಚುರುಕುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಅವರು ಸ್ಪಂದಿಸಿದ್ದಾರೆ ಎಂದು ನೇಹಾ ಹಿರೇಮಠ ತಂದೆ ನಿರಂಜನ ಹಿರೇಮಠ ಹೇಳಿದರು.
ನಗರದಲ್ಲಿಂದು ಪ್ರವಾಸಿ ಮಂದಿರದಲ್ಲಿ ಸಿಐಡಿ ಅಧಿಕಾರಿಗಳನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು, ನಾನು ಇವತ್ತು ಸಿಐಡಿ ಅಧಿಕಾರಿಗಳ ಬಳಿ ಸಮಯ ಕೇಳಿದ್ದೆ. ನಾನು ಕೂಡ ಕೆಲವು ಮಾಹಿತಿಯನ್ನ ಹೇಳಿದ್ದೇನೆ. ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನ ಯಾವ ಸಿಐಡಿ ಅಧಿಕಾರಿ ತನಿಖೆ ಮಾಡುತ್ತಿದ್ದಾರೆ ಅನ್ನೋದರ ಮಾಹಿತಿ ಕೂಡ ಪಡೆದುಕೊಂಡಿದ್ದೇನೆ ಎಂದರು.
ಕಳೆದ ಒಂದು ತಿಂಗಳಿಂದ ನನ್ನ ಮಗಳಾದ ನೇಹಾ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ಈ ಕುರಿತಾಗಿ ಕೆಲವು ಮಾಹಿತಿಯನ್ನ ಕೇಳಿದೆ. ಅವರು ತನಿಖೆ ನಡೆಯುತ್ತಿದೆ ಅಂತ ತಿಳಿಸಿದ್ರು. ಇದುವರೆಗೂ ನೇಹಾ ಕೇಸ್ನಲ್ಲಿ ಒಬ್ಬರನ್ನ ಮಾತ್ರ ಅರೆಸ್ಟ್ ಮಾಡಿದ್ದಾರೆ. ಈ ಬಗ್ಗೆ ನಾನು ಅಧಿಕಾರಿಗಳನ್ನ ಪ್ರಶ್ನೆ ಮಾಡಿದ್ದೇನೆ. ಅದಕ್ಕೆ ಅವರು ಯಾರ ಮೇಲಾದ್ರು ಅನುಮಾನವಿದ್ರೆ ಬರೆದು ಕೊಡಿ ಅಂತ ಹೇಳಿದ್ದಾರೆ ಎಂದು ತಿಳಿಸಿದರು.
ನಾಳೆ ಸಿಐಡಿ ಡಿಜಿ ಅವರು ಹುಬ್ಬಳ್ಳಿಗೆ ಬರುತ್ತಿದ್ದಾರೆ. ನಿಮ್ಮ ಮನೆಗೆ ಭೇಟಿ ನೀಡ್ತಾರೆ ಅಂತ ತಿಳಿಸಿದ್ರು. ಎರಡು ಪ್ರಕರಣಗಳ ಕುರಿತಾಗಿ ಮಾಹಿತಿ ಪಡೆಯಲು ಹಾಗೂ ಮೀಟಿಂಗ್ ಮಾಡಲು ಡಿಜಿ ಬರುತ್ತಿದ್ದಾರೆ ಅಂತ ಮಾಹಿತಿ ನೀಡಿದ್ರು. ಅಂಜಲಿ ಮನೆಯಲ್ಲಿ ಯಾರೂ ಇಲ್ಲ. ತಂದೆ ಇಲ್ಲ, ಸಹೋದರ ಇಲ್ಲ. ನಾನು ಆ ವಾರ್ಡ್ ಸದಸ್ಯನಾಗಿ ಅವರ ಬೆಂಬಲಕ್ಕೆ ನಿಂತಿದ್ದೇನೆ. ಅಂಜಲಿ ಹತ್ಯೆ ಕೇಸ್ ಕೂಡಾ ಫಾಸ್ಟ್ ಟ್ರ್ಯಾಕ್ ಕೋರ್ಟ್ಗೆ ಕೊಡಬೇಕು. ಸಂಪೂರ್ಣವಾಗಿ ಅಂಜಲಿ ಪ್ರಕರಣವನ್ನು ಭೇದಿಸಬೇಕು. ನಾವು ಯಾರ ಕೈಗೊಂಬೆ ಆಗಿ ಕೆಲಸ ಮಾಡಲ್ಲ ಅಂದಿದ್ದಾರೆ. ಹೀಗಾಗಿ ನಮಗೆ ನ್ಯಾಯ ಸಿಗೋ ಭರವಸೆ ಇದೆ ಎಂದರು.
ಸೋಮವಾರ ಸಿಐಡಿ ಡಿಜಿ ಬಂದು ನಮ್ಮ ಜೊತೆ ಮಾತನಾಡಲಿದ್ದಾರೆ. ನೇಹಾ ಕೊಲೆ ಕೇಸ್ ವಿಚಾರವಾಗಿ ಡಿಜಿ ಅವರು ಚರ್ಚೆ ಮಾಡಲಿದ್ದಾರೆಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ. ನಾನು ನೇಹಾ ಕೊಲೆ ಕೇಸ್ ದಿಕ್ಕು ತಪ್ಪಿಸುವ ಕೆಲಸ ಆಗಬಾರದು ಎಂದು ಮನವಿ ಮಾಡಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ : 'ನೇಹಾ ಹತ್ಯೆಯನ್ನು ರಾಜಕೀಯಕ್ಕೆ ಬಳಸಬೇಡಿ': ನಿರಂಜನ ಹಿರೇಮಠ ಮನವಿ - Niranjan Hiremath