ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಪರಸ್ಪರ ಹೊಡೆದಾಡಿಕೊಂಡ ಘಟನೆ ಬೆಳಗಾವಿಯ ಬಸವನ ಕುಡಚಿ ಮತ್ತು ಬಸ್ತವಾಡ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಇಬ್ಬರು ಅಪ್ರಾಪ್ತರು ಸೇರಿ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಸ್ತವಾಡದಲ್ಲಿ ನಡೆದ ಜೈನ ಜಾತ್ರೆಯಲ್ಲಿ ಆದಿತ್ಯ ಪಾಟೀಲ ಮತ್ತು ಬಾಹುಬಲಿ ಕುಡಚಿ ಎಂಬವರ ಮಧ್ಯೆ ಪಾರಿವಾಳದ ವಿಚಾರವಾಗಿ 1,500 ರೂ. ಕೊಡುವ ಬಗ್ಗೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ. ಆದಿತ್ಯ ಮತ್ತು 8 ಜನ ಸೇರಿಕೊಂಡು ದರ್ಶನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದರಿಂದ ಸಿಟ್ಟಿಗೆದ್ದ ದರ್ಶನ ತನ್ನ 15ಕ್ಕೂ ಅಧಿಕ ಸ್ನೇಹಿತರೊಂದಿಗೆ ಬಸವನಕುಡಚಿ ಗ್ರಾಮದಲ್ಲಿರುವ ಆದಿತ್ಯಾ ಅವರ ಮನೆ ಮೇಲೆ ರಾತ್ರೋರಾತ್ರಿ ದಾಳಿ ಮಾಡಿದ್ದಾನೆ. ರಾಡ್, ಪೆಟ್ರೋಲ್, ಕಲ್ಲುಗಳ ಸಮೇತ ಮನೆ ದ್ವಂಸಗೊಳಿಸಲು ಯತ್ನಿಸಿದ್ದಾರೆ. ಮನೆಯಲ್ಲಿದ್ದ ಟಿವಿ, ಕಿಟಕಿ ಗಾಜು ಪುಡಿ, ಪುಡಿಗೊಳಿಸಿದ್ದು, ಪಾತ್ರೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಅಲ್ಲದೇ, ಆದಿತ್ಯಾ ತಂದೆ ಮತ್ತು ಸಹೋದರನಿಗೆ ಹೊಡೆದಿದ್ದಾರೆಂದು ದೂರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಮದುವೆ ಮಾಡಲೊಪ್ಪದ ಯುವತಿಯ ತಾಯಿ, ತಮ್ಮನನ್ನು ಭೀಕರವಾಗಿ ಕೊಲೆಗೈದ ಯುವಕ
ಎರಡೂ ಘಟನೆ ಸಂಬಂಧ ಹಿರೇಬಾಗೇವಾಡಿ, ಮಾಳಮಾರುತಿ ಠಾಣೆಯಲ್ಲಿ ದೂರು - ಪ್ರತಿದೂರು ದಾಖಲಾಗಿವೆ. ಇಬ್ಬರು ಅಪ್ರಾಪ್ತರು ಸೇರಿ ಮೂವರನ್ನು ಹಿರೇಬಾಗೇವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾಗೂ ಮಾಳಮಾರುತಿ ಠಾಣೆ ಪೊಲೀಸರು ಆರು ಜನರನ್ನು ಬಂಧಿಸಿರುವುದಾಗಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರೋಹಣ ಜಗದೀಶ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೌಟುಂಬಿಕ ಕಲಹ; ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಕತ್ತು ಕೊಯ್ದು ಪೊಲೀಸರಿಗೆ ಶರಣಾದ ಗಂಡ