ಹಾಸನ: "ಚನ್ನಪಟ್ಟಣದ ಉಪಚುನಾವಣೆ ದೇಶದ ಗಮನ ಸೆಳೆದಿದೆ. ಚುನಾವಣೆ ವಿಷಯದಲ್ಲಿ ವಿರೋಧಿಗಳು ಕೊಡ್ತಿರುವ ಹೇಳಿಕೆ ಗಮನಿಸಿದ್ದೇನೆ. ಅವರಿಗೆ ಜನರೇ ಉತ್ತರ ಕೊಡ್ತಾರೆ, ಜನರು ನಿಖಿಲ್ಗೆ ಅಭಿಮನ್ಯು ಅಲ್ಲ, ಅರ್ಜುನನ ಪಾತ್ರ ಕೊಡ್ತಾರೆ. ಖಂಡಿತ ಏನೇ ಕುತಂತ್ರ ಮಾಡಿದರು ಕೂಡ ಜನರು ನಿಖಿಲ್ನನ್ನು ಗೆಲ್ಲಿಸುತ್ತಾರೆ" ಎಂದು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಭಾನುವಾರ ನಗರದ ಹಾಸನಾಂಬೆ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, "ನಾವು ಪ್ರತಿ ವರ್ಷ ಹಾಸನಾಂಬೆಯ ದರ್ಶನ ಪಡೆಯುತ್ತೇವೆ. ಈ ಬಾರಿ ಜಿಲ್ಲಾಡಳಿತ ಭಕ್ತರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿದೆ. ಭಕ್ತರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಚಿಕ್ಕವಯಸ್ಸಿನಿಂದಲೂ ಹಾಸನಾಂಬೆಯ ಪವಾಡ ನೋಡಿದ್ದೇನೆ. ಈ ಬಾರಿ ನನ್ನ ಮಗ ಚುನಾವಣೆಗೆ ನಿಂತಿದ್ದಾನೆ. ಈ ಬಾರಿ ಅವನಿಗೆ ಗೆಲುವಾಗಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ" ಎಂದರು.
"ಮಹಾ ಜನತೆ ಮತ್ತು ಕಾರ್ಯಕರ್ತರು ನಿಖಿಲ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಡಿಕೆ ಸಹೋದರರು ಏನೇ ಕುತಂತ್ರ ಮಾಡಲಿ ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ಅಭ್ಯರ್ಥಿಯನ್ನು ಅವರೇ ನಿಲ್ಲಿಸಿದ್ದಾರೆ. ಕಾಂಗ್ರೆಸ್ನ ಈಗಿನ ಅಭ್ಯರ್ಥಿ (ಸಿ.ಪಿ.ಯೋಗೇಶ್ವರ್) ಹಾಗೂ ಡಿಕೆ ಸಹೋದರರು ಪರಸ್ಪರ ಈ ಹಿಂದಿನ ಟೀಕೆಗಳನ್ನು ಸಿಡಿ ಮೂಲಕ ಮೊದಲು ಜನರ ಮುಂದೆ ಇಡಲಿ. ಈ ಬಗ್ಗೆ ಜನ ಮುಂದೆ ತೀರ್ಮಾನ ಮಾಡುತ್ತಾರೆ" ಎಂದು ಡಿಕೆ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದರು.
"ರಾಜ್ಯದಲ್ಲಿ ರೈತರ ಆತ್ಮಹತ್ಯೆ, ಯುವಕರು ಆನ್ಲೈನ್ ಗೇಮ್, ಲಾಟರಿಗೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಡ್ರಗ್ಸ್ ಮತ್ತು ಮಾದಕ ವಸ್ತು ದಂಧೆ ಕರ್ನಾಟಕದಲ್ಲಿ ಹೆಚ್ಚಳವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ" ಎಂದು ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: ನಿಖಿಲ್ ಎರಡು ಬಾರಿ ಸೋತಿದ್ರು, ಆಗ ಅಭಿಮನ್ಯು ಆಗಿರಲಿಲ್ವಾ: ಹೆಚ್ಡಿಕೆಗೆ ಸಿಎಂ ತಿರುಗೇಟು