ಬೆಂಗಳೂರು: ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಭಾನುವಾರ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಜೆಡಿಎಸ್ –ಬಿಜೆಪಿ ಮೈತ್ರಿ, ಮುಂಬರುವ ಲೋಕಸಭೆ ಚುನಾವಣೆಗೆ ನಡೆದಿರುವ ಸಿದ್ಧತೆ, ಕ್ಷೇತ್ರ ಹಂಚಿಕೆ ಹಾಗೂ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ನಿಖಿಲ್ ಅವರು ಮಾಜಿ ಪ್ರಧಾನಿ ಜತೆ ಚರ್ಚಿಸಿದರು.
ಪಕ್ಷದ ಕಚೇರಿಯಲ್ಲಿ ವಿವಿಧ ಲೋಕಸಭೆ ಕ್ಷೇತ್ರಗಳ ಮುಖಂಡರ ಜತೆ ಸಭೆಗಳನ್ನು ನಡೆಸಿದ್ದು, ಆ ಸಭೆಗಳ ಫಲಶ್ರುತಿ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು, ಬಿಜೆಪಿ ರಾಷ್ಟ್ರೀಯ ನಾಯಕರ ಜತೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿ ಅವರೊಂದಿಗೆ ತೆರಳಿ ನಡೆಸಿರುವ ಚರ್ಚೆಗಳ ಮಾಹಿತಿಯನ್ನು ನಿಖಿಲ್ ಅವರು ದೇವೇಗೌಡರಿಗೆ ವಿವರಿಸಿದರು. ಪಕ್ಷ ಸಂಘಟನೆಗಾಗಿ ತಾವು ಕೈಗೊಂಡಿರುವ ಉಪಕ್ರಮಗಳ ಬಗ್ಗೆಯೂ ನಿಖಿಲ್ ಗಮನಕ್ಕೆ ತಂದರು.
ಬಳಿಕ, ಯಾವುದೇ ಸಂದರ್ಭದಲ್ಲಿಯೂ ಚುನಾವಣೆ ದಿನಾಂಕ ಘೋಷಣೆ ಆಗಬಹುದು. ಅದಕ್ಕೆ ಪಕ್ಷ ತಯಾರಿರಬೇಕು. ಯುವ ಜನತಾದಳ ಕಾರ್ಯಕರ್ತರನ್ನು ಪಕ್ಷದ ಕೆಲಸಕ್ಕೆ ತೊಡಗಿಸಬೇಕು. ಪಕ್ಷಕ್ಕೆ ಅವಿಶ್ರಾಂತವಾಗಿ ದುಡಿಮೆ ಮಾಡಬೇಕು ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ನಿಖಿಲ್ ಕುಮಾರಸ್ವಾಮಿಗೆ ಸೂಚನೆ ನೀಡಿದರು. ಅಲ್ಲದೆ, ಕೆಲ ಮಹತ್ವದ ಸಲಹೆ, ಸೂಚನೆಗಳನ್ನು ನೀಡಿರುವ ಮಾಜಿ ಅವರು, ಸರಣಿ ಸಭೆಗಳನ್ನು ಮುಂದುವರಿಸಬೇಕು. ಕಾರ್ಯಕರ್ತರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಇದನ್ನೂ ಓದಿ: ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ; ಉಸ್ತುವಾರಿಗಳನ್ನು ನೇಮಕ ಮಾಡಿದ ಜೆಡಿಎಸ್