ಬೆಂಗಳೂರು: ಕೆಲವರು ಮಕ್ಕಳಾಗಲಿ ಎಂದು ಕಂಡ ಕಂಡ ದೇವರಿಗೆ ಹರಕೆ ಹೊರುತ್ತಾರೆ. ಆದರೆ ಇನ್ನು ಕೆಲವರು ಮಕ್ಕಳಾದರೂ ಮೃಗಗಳಾಗಿಬಿಡುತ್ತಾರೆ. ಇಲ್ಲಿ ಆಗಿರೋದು ಅದೇ. ನವಜಾತ ಶಿಶು ಮೂರ್ನಾಲ್ಕು ಗಂಟೆಯಲ್ಲೇ ಡಸ್ಟ್ ಬಿನ್ ಸೇರಿದೆ. ಹೌದು, ಶಿಶುವನ್ನು ಕಸದ ಬುಟ್ಟಿಗೆಸೆದು ಮನುಷ್ಯ ರೂಪದ ರಾಕ್ಷಸರು ವಿಕೃತಿ ಮೆರೆದಿದ್ದಾರೆ.
ಪ್ರಶಾಂತಿ ಎಕ್ಸ್‌ಪ್ರೆಸ್ ರೈಲು ಭುವನೇಶ್ವರದಿಂದ ಬೆಂಗಳೂರಿನ ಯಲಹಂಕ ಸಮೀಪ ಬರುವಾಗ ಎಸಿ ಬೋಗಿಯಲ್ಲಿರುವ ಡಸ್ಟ್ ಬಿನ್ನಲ್ಲಿ ನವಜಾತ ಶಿಶು ಕಂಡು ಬಂದಿದೆ. ಗಾಬರಿಗೊಂಡ ಪ್ರಯಾಣಿಕರು ಸ್ಟೇಷನ್ ಮಾಸ್ಟರ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಸ್ಟೇಷನ್ ಡಾಕ್ಟರ್, ಗಂಡು ನವಜಾತ ಶಿಶು ಜನಿಸಿ ಮೂರರಿಂದ ನಾಲ್ಕು ಗಂಟೆಯಾಗಿದ್ದು ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ. ತಕ್ಷಣ ಮೃತದೇಹವನ್ನು ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿತ್ತು.
ಶಿಶುವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಡಸ್ಟ್ ಬಿನ್ಗೆ ಬಿಸಾಡಲಾಗಿತ್ತು. ಸಿಗರೇಟ್ ಪ್ಯಾಕೆಟ್, ಪಾನ್ ಮಸಾಲಾ ಜಗಿದು ಉಗಿದಿರುವ ಮಧ್ಯೆ ಬಿದ್ದಿರುವ ಕಂದಮ್ಮನ ದೃಶ್ಯ ನಿಜಕ್ಕೂ ಕರುಳು ಹಿಂಡುವಂತಿತ್ತು.
ಡಸ್ಟ್ ಬಿನ್ನಲ್ಲೇ ಶಿಶು ಪ್ರಾಣ ಬಿಟ್ಟಿದೆಯೇ ಅಥವಾ ಕೊಂದು ತಂದು ಬಿಸಾಡಲಾಗಿದೆಯೇ ಎಂಬ ಶಂಕೆ ಇದೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ರೈಲು ಕೋಚ್‌ನ ಮಾಹಿತಿ ಪಡೆದು ಯಾರೆಲ್ಲ ಪ್ರಯಾಣಿಕರು ಆಗಮಿಸಿದ್ದರು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಸದ್ಯ ರೈಲು ಭುವನೇಶ್ವರ ತಲುಪಿದ್ದು, ಬರುವಿಕೆಗಾಗಿ ಕಾಯಲಾಗ್ತಿದೆ. ಬಂದ ಬಳಿಕ ಸಿಸಿಟಿವಿ ದೃಶ್ಯ ಪರಿಶೀಲಿಸಲಾಗುವುದು ಎಂದು ರೈಲ್ವೆ ಎಸ್‌ಪಿ ಸೌಮ್ಯಲತಾ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ತುಮಕೂರಿನಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ: 7 ಮಂದಿ ಬಂಧನ, 5 ಮಕ್ಕಳ ರಕ್ಷಣೆ - Child Trafficking Network Busted