ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ಪ್ರಾಣಿ ವಿನಿಮಯ ಕಾರ್ಯಕ್ರಮದಡಿ, ಪಾಟ್ನಾ ಮೃಗಾಲಯದಿಂದ ಎರಡು ಮೊಸಳೆಗಳು (1 ಗಂಡು, 1 ಹೆಣ್ಣು), 6 ವರ್ಷದ ಒಂದು ಹೆಣ್ಣು ಬಿಳಿ ಹುಲಿ ಹಾಗೂ ಒಂದು ಹೆಣ್ಣು ಕಾಡು ಬೆಕ್ಕನ್ನು ಇಲ್ಲಿಗೆ ತರಲಾಗಿದೆ.
ಐದು ದಿನಗಳ ಪ್ರಯಾಣದ ಬಳಿಕ ಈ ಪ್ರಾಣಿಗಳು ಶುಕ್ರವಾರ ಬನ್ನೇರುಘಟ್ಟ ಉದ್ಯಾನಕ್ಕೆ ತಲುಪಿದ್ದು, ಆದರದಿಂದ ಸ್ವಾಗತಿಸಿಕೊಂಡಿದ್ದಾರೆ. ಪ್ರತಿಯಾಗಿ, ಬನ್ನೇರುಘಟ್ಟದಿಂದ ಪಾಟ್ನಾ ಮೃಗಾಲಯಕ್ಕೆ ಒಂದು ಗಂಡು ಜೀಬ್ರಾ, ಎರಡು ಗಂಡು ಥಮಿನ್ ಜಿಂಕೆಗಳನ್ನು ಕಳುಹಿಸಲಾಗಿದೆ.
ತೆಲಂಗಾಣದಲ್ಲಿ ಅಪಘಾತ: ಪಾಟ್ನಾ ಮೃಗಾಲಯದಿಂದ ಪ್ರಾಣಿಗಳನ್ನು ಕರೆತರುವ ವೇಳೆ ಟ್ರಕ್ ತೆಲಂಗಾಣದಲ್ಲಿ ಅಪಘಾತಕ್ಕೀಡಾಗಿತ್ತು. ಅದೃಷ್ಟವಶಾತ್ ಪ್ರಾಣಿಗಳು ಹಾಗೂ ಜೊತೆಯಲ್ಲಿದ್ದ ಪ್ರಾಣಿಪಾಲಕ, ಪಶುವೈದ್ಯಾಧಿಕಾರಿಗೆ ಯಾವುದೇ ತೊಂದರೆಯಾಗಿಲ್ಲ. ಬಳಿಕ ಸ್ಥಳೀಯ ಅರಣ್ಯಾಧಿಕಾರಿಗಳ ಸಹಾಯದಿಂದ ಸುರಕ್ಷಿತವಾಗಿ ಬನ್ನೇರುಘಟ್ಟಕ್ಕೆ ಕರೆತರಲಾಯಿತು.
ಈ ಬಗ್ಗೆ ಬನ್ನೇರುಘಟ್ಟ ಜೈವಿಕ ಉದ್ಯಾನದ ವೈದ್ಯ ಡಾ.ಕಿರಣ್ ಮಾಹಿತಿ ನೀಡಿ, ''ಉದ್ಯಾನಕ್ಕೆ ತಂದಿರುವ ಪ್ರಾಣಿಗಳು ಸುರಕ್ಷಿತವಾಗಿವೆ. ಮುಂಜಾಗ್ರತಾ ಕ್ರಮವಾಗಿ 45 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಇಲ್ಲಿನ ಪರಿಸರಕ್ಕೆ ಹೊಂದಿಕೊಂಡ ಬಳಿಕ ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗುವುದು'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬನ್ನೇರುಘಟ್ಟಕ್ಕೆ ಪ್ರಾಣಿಗಳನ್ನು ತರುತ್ತಿದ್ದ ವಾಹನ ಅಪಘಾತ: ಬಿಳಿ ಹುಲಿ, ಮೊಸಳೆಗಳು ಸೇಫ್