ಹುಬ್ಬಳ್ಳಿ: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನಯ್ಯ ಹಿರೇಮಠ ಎಂಬವರ ಪುತ್ರಿ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು, ಇಲ್ಲಿಯ ಒಂದನೇ ಹೆಚ್ಚುವರಿ ದಿವಾಣಿ ನ್ಯಾಯಾಲಯ ಮತ್ತು 3ನೇ ಜೆಎಂಎಫ್‌ಸಿ ಕೋರ್ಟ್ಗೆ 483 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ವಿದ್ಯಾನಗರದ ಪ್ರತಿಷ್ಠಿತ ಕಾಲೇಜಿನ ಆವರಣದಲ್ಲಿ ಏ.18ರಂದು ಸವದತ್ತಿ ಮೂಲದ ಫಯಾಜ್ ಎಂಬಾತ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಕುಪಿತಗೊಂಡು ಚಾಕುವಿನಿಂದ ನೇಹಾಗೆ ಇರಿದು ಕೊಲೆ ಮಾಡಿದ್ದ. ವಿದ್ಯಾನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಪೊಲೀಸ್ ವಿಚಾರಣೆಯ ವೇಳೆ ಪ್ರೀತಿ ನಿರಾಕರಿಸಿದ್ದರಿಂದ ಸಿಟ್ಟಾಗಿ ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದ. ಈ ಘಟನೆ ಖಂಡಿಸಿ ಸಾರ್ವಜನಿಕರು, ವಿವಿಧ ಸಂಘಟನೆಗಳು ಹಾಗೂ ಬಿಜೆಪಿಯಿಂದ ತೀವ್ರ ಪ್ರತಿಭಟನೆ ನಡೆದಿತ್ತು. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಸೇರಿದಂತೆ ಕೊಲೆಯಾದ ನೇಹಾಳ ತಂದೆ ಒತ್ತಾಯಿಸಿದ್ದರು.
ಪ್ರಕರಣದ ಗಂಭೀರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ಎಸ್‌ಪಿ ಎನ್.ವೆಂಕಟೇಶ ನೇತೃತ್ವದಲ್ಲಿ ಸುಮಾರು 2 ತಿಂಗಳು 20 ದಿನಗಳವರೆಗೆ ತನಿಖೆ ನಡೆದಿದೆ. ಇದೀಗ ಡಿವೈಎಸ್‌ಪಿ ಎನ್.ಎಚ್.ಪೈಕ್ ಅವರು ಸ್ಥಳೀಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.