ಹುಬ್ಬಳ್ಳಿ: ''ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ನೇಹಾ ತಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ಮನವಿ ಮಾಡಿದ್ದಾರೆ'' ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ನಿನ್ನೆ ಅಮಿತ್ ಶಾ ಬಹಿರಂಗ ಸಭೆಯ ಬಳಿಕ ನೇಹಾ ಪೋಷಕರ ಮನವಿ ಮೇರೆಗೆ ಅಮಿತ್ ಶಾರನ್ನು ಭೇಟಿ ಮಾಡಿಸಲಾಗಿತ್ತು. ಈ ವೇಳೆ ನಿರಂಜನ ಹಿರೇಮಠ ದಂಪತಿ ಹಲವಾರು ವಿಚಾರಗಳನ್ನು ಹೇಳಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಎಂದು ಅಮಿತ್ ಶಾ ಭರವಸೆ ಕೊಟ್ಟಿದ್ದಾರೆ'' ಎಂದರು.
''ನೇಹಾ ಪೋಷಕರು ನಮಗೆ ತ್ವರಿತ ನ್ಯಾಯ ಬೇಕು, ಹಾಗಾಗಿ ಸಿಬಿಐಗೆ ಪ್ರಕರಣವನ್ನು ಕೊಡಿ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಮಿತ್ ಶಾ, ನಾವಾಗಿಯೇ ಸಿಬಿಐ ತನಿಖೆ ಕೈಗೊಳ್ಳಲು ಬರಲ್ಲ. ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಅಥವಾ ಕೋರ್ಟ್ ನಿರ್ದೇಶನ ಕೊಡಬೇಕು. ಹಾಗಾದಲ್ಲಿ ಮಾತ್ರ ಸಿಬಿಐ ತನಿಖೆ ಸಾಧ್ಯ. ಯಾವುದೇ ಸಂದರ್ಭದಲ್ಲಿಯೂ ನಿಮ್ಮ ಜೊತೆ ಇರುತ್ತೇವೆ ಎಂಬ ಭರವಸೆ ನೀಡಿದ್ದಾರೆ'' ಎಂದು ಜೋಶಿ ತಿಳಿಸಿದರು.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮೇಲಿನ ಪ್ರಕರಣದ ವಿಚಾರವಾಗಿ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ''ಪ್ರಜ್ವಲ್ ಕರೆತರುವ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಬೇರೆಯವರ ಮೇಲೆ ತಪ್ಪು ಹೊರೆಸುವ ಪ್ರಯತ್ನ ಆಗುತ್ತಿದೆ'' ಎಂದು ಆರೋಪಿಸಿದರು.
''ಇದುವರೆಗೂ ತಮ್ಮ ಹಾಗೂ ಬಿಜೆಪಿ ಪ್ರಮುಖರ ಪ್ರಶ್ನೆಗೆ ರಾಜ್ಯ ಸರ್ಕಾರ, ಸಿಎಂ ಒಂದೇ ಒಂದು ಉತ್ತರ ಕೊಟ್ಟಿಲ್ಲ. ಪ್ರಜ್ವಲ್ ರೇವಣ್ಣನ ವಿಡಿಯೋ ಕ್ಲಿಪ್ ಏಪ್ರಿಲ್ 21ಕ್ಕೆ ಹೊರಬಂದರೆ, 28 ರವರೆಗೆ ಎಫ್ಐಆರ್ ಏಕೆ ಮಾಡಿಲ್ಲ'' ಎಂದು ಜೋಶಿ ಪ್ರಶ್ನಿಸಿದರು. ''ಈ ವಿಡಿಯೋ ಆರು ತಿಂಗಳು, ಒಂದು ವರ್ಷದ ಹಳೆಯದು ಅಲ್ಲ. 2018 ರಿಂದಲೂ ಇದೆ. ಯಾವ ಕಾರಣಕ್ಕೆ ಕೂಡಲೇ ಎಫ್ಐಆರ್ ಮಾಡಲಿಲ್ಲ. ವೋಟ್ ಬ್ಯಾಂಕ್ಗಾಗಿ ರಾಜಕೀಯ ಮಾಡುತ್ತಿದ್ದಾರೆ'' ಎಂದು ಪ್ರಲ್ಹಾದ್ ಜೋಶಿ ಆಪಾದಿಸಿದರು.
ಇದನ್ನೂ ಓದಿ: ಲುಕ್ ಔಟ್ ನೊಟೀಸ್ ಜಾರಿ: ಪ್ರಜ್ವಲ್ ರೇವಣ್ಣ ಇಂದು ವಿಚಾರಣೆಗೆ ಗೈರಾದರೆ ಬಂಧನ ಖಚಿತ - Look out notice issued