ರಾಮನಗರ: ಹೆಚ್.ಡಿ.ಕುಮಾರಸ್ವಾಮಿ ಸಂಸದರಾಗಿ ಕೇಂದ್ರದ ಮಂತ್ರಿಯಾದ ಹಿನ್ನೆಲೆಯಲ್ಲಿ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಎನ್ಡಿಎ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅಥವಾ ಸ್ಥಳೀಯ ಅಭ್ಯರ್ಥಿ ಹೆಚ್.ಸಿ.ಜಯಮುತ್ತು ಅವರನ್ನು ಕಣಕ್ಕಿಳಿಸಲು ತಯಾರಿ ನಡೆಯುತ್ತಿದೆ. ಮತ್ತೊಂದೆಡೆ, ಕಾಂಗ್ರೆಸ್ನಿಂದ ಸ್ಥಳೀಯ ಅಭ್ಯರ್ಥಿ ರಘುನಂದನ್ ರಾಮಣ್ಣ ಅಥವಾ ಡಿ.ಕೆ.ಬ್ರದರ್ಸ್ ಕುಟುಂಬದಿಂದ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಎನ್ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ಚಿಹ್ನೆಯ ಮೂಲಕ ಅಭ್ಯರ್ಥಿಯಾಗುವುದು ಬಹುತೇಕ ಫಿಕ್ಸ್ ಎಂದೇ ಹೇಳಲಾಗುತ್ತಿದೆ. ಇದರಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ, ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ಗೆ ಹಿನ್ನೆಡೆಯಾಗುವ ಸಾಧ್ಯತೆಯಿದೆ. ಹಾಗೊಂದು ವೇಳೆ ಟಿಕೆಟ್ ದೊರೆಯದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವರು ಅಖಾಡ ಸಜ್ಜುಗೊಳಿಸುತ್ತಿದ್ದಾರೆ.
ನಾಳೆ ಕ್ಷೇತ್ರದ ಖಾಸಗಿ ರೆಸಾರ್ಟ್ನಲ್ಲಿ ಬಿಜೆಪಿ ಪ್ರಮುಖ ಮುಖಂಡರ ಸಭೆಯನ್ನು ಸಿಪಿವೈ ನೇತೃತ್ವದಲ್ಲಿ ಕರೆಯಲಾಗಿದೆ. ಹೀಗಾಗಿ, ಅವರ ಮುಂದಿನ ನಡೆ ಕುರಿತು ಚನ್ನಪಟ್ಟಣ ಕ್ಷೇತ್ರದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಈ ಹಿಂದಿನಿಂದಲೂ ಚನ್ನಪಟ್ಟಣ ಜೆಡಿಎಸ್ನ ಭದ್ರಕೋಟೆಯಾಗಿದ್ದು, ಕಳೆದ ಎರಡು ಬಾರಿ ಕ್ಷೇತ್ರದಲ್ಲಿ ಪಕ್ಷ ಗೆದ್ದಿದೆ. 2013ರಲ್ಲೂ ಜೆಡಿಎಸ್ಗೆ ಕ್ಷೇತ್ರದಲ್ಲಿ ಹೆಚ್ಚಿನ ಮತಗಳು ಬಂದಿದ್ದವು.
ಉಪ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಈಗಾಗಲೇ ಬಿಡದಿ ಸಮೀಪದ ಕೇತುಗಾನಹಳ್ಳಿಯ ತಮ್ಮ ತೋಟದಲ್ಲಿ ಚನ್ನಪಟ್ಟಣ ಕ್ಷೇತ್ರದ ಕಾರ್ಯಕರ್ತರು, ಮುಖಂಡರ ಸಭೆ ಕರೆದು ಸಮಾಲೋಚಿಸಿ, ಜೆಡಿಎಸ್ ಪಕ್ಷದಿಂದಲೇ ಅಭ್ಯರ್ಥಿಯನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ.
ಉಪ ಚುನಾವಣೆಗೆ ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು, ಅಭ್ಯರ್ಥಿ ಯಾರಾಗಬೇಕು ಎನ್ನುವ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಇದಲ್ಲದೆ ಜೆಡಿಎಸ್-ಬಿಜೆಪಿ ಎರಡೂ ಪಕ್ಷಗಳು ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ಮಿತ್ರಪಕ್ಷ, ಬಿಜೆಪಿ ನಾಯಕರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಕೆಲಸ ಮಾಡಬೇಕು ಎಂದು ಮುಖಂಡರಿಗೆ ತಾಕೀತು ಮಾಡಿದ್ದಾರೆ.
ನಿಖಿಲ್ ಅಭ್ಯರ್ಥಿ ಆಗಬೇಕೆಂಬ ಒತ್ತಾಯ: ಮೈತ್ರಿ ಪಕ್ಷದಿಂದ ನಿಖಿಲ್ ಕುಮಾರಸ್ವಾಮಿ ಅವರೇ ಉಪ ಚುನಾವಣೆಯ ಅಭ್ಯರ್ಥಿಯಾಗಬೇಕು ಎಂಬ ಒತ್ತಡ, ಒತ್ತಾಯ ಕೇಳಿ ಬಂದಿದೆ. ನಿಖಿಲ್ ಕುಮಾರಸ್ವಾಮಿ ನಿಲ್ಲಬೇಕೆಂದು ಬಹುತೇಕ ಕ್ಷೇತ್ರದ ಜೆಡಿಎಸ್ ನಾಯಕರು, ಮುಖಂಡರ ಅಭಿಪ್ರಾಯ. ಬೆಳವಣಿಗೆ ನೋಡಿಕೊಂಡು ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗೆ ಸರ್ಕಾರದ ಬಲ: ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಆಡಳಿತಾರೂಢ ಸರ್ಕಾರದ ಬಲ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಕ್ಷೇತ್ರದ ಅಭಿವೃದ್ಧಿಯಾಗಬೇಕಾದರೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಈಗಾಗಲೇ ಕೋಟ್ಯಂತರ ರೂ ಅನುದಾನವನ್ನು ಕಾಂಗ್ರೆಸ್ ನಾಯಕರು ಕ್ಷೇತ್ರಕ್ಕೆ ತರುವ ಮೂಲಕ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ.
ಬಾಗಿಲಿಗೆ ಬಂದ ಸರ್ಕಾರ ಎಂಬ ವಿನೂತನ ಕಾರ್ಯಕ್ರಮದಡಿಯಲ್ಲಿ ಕ್ಷೇತ್ರದ ಜನರ ಸಮಸ್ಯೆಯನ್ನು ಬಗೆಹರಿಸುವ ಕೆಲಸವನ್ನು ಸರ್ಕಾರ ಈಗಾಗಲೇ ಮಾಡಿದ್ದು, ಕಾಂಗ್ರೆಸ್ ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಕೂಡ ಸರ್ಕಾರದ ಬಲ ಇರುವುದರಲ್ಲಿ ಎರಡು ಮಾತಿಲ್ಲ. ಅದರಂತೆ ಈಗಾಗಲೆೇ ಡಿ.ಕೆ.ಶಿವಕುಮಾರ್ ನಾನೇ ಕ್ಷೇತ್ರದ ಅಭ್ಯರ್ಥಿ, ನನ್ನ ನೋಡಿಕೊಂಡು ಕ್ಷೇತ್ರದ ಜನ ಮತ ಚಲಾಯಿಸುತ್ತಾರೆಂದು ಹೇಳುತ್ತಿದ್ದರೆ, ಮತ್ತೊಂದೆಡೆ ಕ್ಷೇತ್ರದ ಸ್ಥಳೀಯ ಅಭ್ಯರ್ಥಿಯಾದ ರಘುನಂದನ್ ರಾಮಣ್ಣನವರೇ ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆ ; ಕಾರ್ಯಕರ್ತರು, ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ಹೆಚ್ಡಿಕೆ