ಚಿಕ್ಕಮಗಳೂರು: ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಕೌಟುಂಬಿಕ ಕಲಹದಿಂದಾಗಿ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಹೊರವಲಯದ ತೇಗೂರು ಗ್ರಾಮದಲ್ಲಿ ನಡೆದಿದೆ. ವಿನೋದ್ (24) ಸಾವಿಗೀಡಾದ ಯುವಕ. ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ವಿನೋದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ಪತ್ನಿ ಬಿಟ್ಟು ಹೋದಳೆಂದು ಮನನೊಂದ ವಿನೋದ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತೇಗೂರು ಗ್ರಾಮದ ಯುವತಿ ಹಾಗೂ ವಿನೋದ್ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಯುವತಿ ಮನೆಯವರ ಸಮ್ಮತಿ ಇರಲಿಲ್ಲ. ಹೀಗಾಗಿ ಯುವತಿ ಮನೆಯವರ ವಿರೋಧದ ನಡುವೆಯೇ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಡಿಸೆಂಬರ್ 10ರಂದು ವಿನೋದ್ ಹಾಗೂ ಯುವತಿ ವಿವಾಹವಾಗಿದ್ದರು. ಪರಸ್ಪರ ಪ್ರೀತಿಸುದ್ದ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಂಸಾರ ಶುರು ಮಾಡುವ ಹೊತ್ತಲ್ಲೇ ಪೊಲೀಸರು ನವಜೋಡಿಯನ್ನು ಠಾಣೆಗೆ ಕರೆ ತಂದಿದ್ದರು. ಯುವತಿಯ ಕುಟುಂಬಸ್ಥರ ದೂರಿನ ಮೇರೆಗೆ ಪಂಚಾಯಿತಿ ನಡೆದಿತ್ತು. ಆಗ ಯುವತಿ ತನ್ನ ತಾಯಿ ಮನೆಗೆ ಹೋಗುವುದಾಗಿ ಹೇಳಿಕೆ ನೀಡಿದ್ದಳು ಎಂದು ತಿಳಿದುಬಂದಿದೆ.
ಈ ಬಗ್ಗೆ ವಿನೋದ್ ಅವರ ತಂದೆ ಮಾತನಾಡಿದ್ದು, ''ನನ್ನ ಮಗ ಕಳೆದ ಒಂದು ವರ್ಷದಿಂದ ಒಂದು ಹುಡುಗಿಯನ್ನು ಲವ್ ಮಾಡ್ತಿದ್ದ. ನಂತರ ಇಬ್ಬರೂ ಒಪ್ಪಿ ಬೈಕ್ನಲ್ಲಿ ಎಲ್ಲೆಡೆ ಸುತ್ತುತ್ತಿದ್ರು. ಮನೆಯಲ್ಲಿ ಹುಡುಗ ನೋಡುತ್ತಿದ್ದಾರೆ, ಮದುವೆಯಾಗೋಣ ಎಂದು ಯುವತಿ ಹೇಳಿದ್ದಾಳೆ. ಅದಕ್ಕೆ ನಿಮ್ಮ ಮನೆಯವರನ್ನು ಒಪ್ಪಿಸಿ ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ. ಇದನ್ನು ಕೇಳದ ಆಕೆ ಹಠ ಹಿಡಿದು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ನಂತರ ನಾವು ಇಬ್ಬರಿಗೂ ಮದುವೆ ಮಾಡಿದೆವು. ಮೂರು ದಿನದ ನಂತರ ಹುಡುಗಿಯ ತಾಯಿ ಬಂದು, ಇವರ ಮನೆಯಲ್ಲಿ ನೀನು ಜೀವನ ಮಾಡಲು ಸಾಧ್ಯವಿಲ್ಲ ಬಾ ಎಂದು ಎಳೆದುಕೊಂಡು ಹೋಗಲು ಪ್ರಯತ್ನಿಸಿದರು. ಪೊಲೀಸ್ ಠಾಣೆಗೆ ಕಂಪ್ಲೇಂಟ್ ಮಾಡಿ ಕರೆದುಕೊಂಡು ಹೋದರು. ಇದಾದ ಬಳಿಕ ಹುಡುಗಿ ನಾನು ಗಂಡನ ಮನೆಗೆ ಹೋಗುವುದಾಗಿ ಠಾಣೆಯಲ್ಲಿ ಮುಚ್ಚಳಿಕೆ ಬರೆದಳು".
"ತದನಂತರ ನಾನು ನನ್ನ ಭಾವನ ಮನೆಗೆ ಕಳುಹಿಸಿದೆ. ಅವರು ಧರ್ಮಸ್ಥಳ, ಸುಬ್ರಮಣ್ಯಕ್ಕೆ ಹೋಗಿ ಬಂದಿದ್ದಾರೆ. ಆಮೇಲೆ ಏನಾಯ್ತೋ ಗೊತ್ತಿಲ್ಲ. ನಾನು ತಾಯಿ ಮನೆಗೆ ಹೋಗಬೇಕು ಅಂತ ಹೋದಳು. ಮಹಿಳಾ ಆಯೋಗಕ್ಕೂ ದೂರು ನೀಡಿದಳು. ಅಲ್ಲಿ ನಾನು ಸಮಾಧಾನ ಮಾಡಲು ಪ್ರಯತ್ನಿಸಿದೆ. ಆದರೆ ಆಕೆ ನಿಮ್ಮ ಮಗನೂ ಇಷ್ಟವಿಲ್ಲ, ಮನೆಯೂ ಇಷ್ಟವಿಲ್ಲ ಎಂದಳು'' ಎಂದು ತಿಳಿಸಿದರು.
ಕಬಡ್ಡಿ ತರಬೇತುದಾರ ಮಂಜುನಾಥ್ ಮಾತನಾಡಿ, ''ಇವರಿಬ್ಬರು ಮದುವೆಯಾಗಿ ಸ್ವಲ್ಪ ದಿನ ಜೊತೆಗಿದ್ದರು. ಲವ್ ಮ್ಯಾರೇಜ್ ಆಗಿರುವುದು ಹುಡುಗಿ ಮನೆಯವರಿಗೆ ಇಷ್ಟವಿರಲಿಲ್ಲ. ಆಮೇಲೆ ಹತ್ತು ದಿನವಿದ್ದು ಅಮ್ಮನ ಮನೆಗೆ ಮಾತನಾಡಿಸಿಕೊಂಡು ಬರುತ್ತೇನೆ ಎಂದು ಹೋಗಿದ್ದಾಳೆ. ಇವರು ಮಾನವೀಯತೆ ದೃಷ್ಠಿಯಿಂದ ಬಿಟ್ಟಿದ್ದಾರೆ. ಅಲ್ಲಿ ಅವರು ಹುಡುಗಿ ಮೈಂಡ್ ಡೈವರ್ಟ್ ಮಾಡಿ ಮಹಿಳಾ ಆಯೋಗಕ್ಕೆ ಕಂಪ್ಲೆಂಟ್ ಮಾಡಿದ್ದಾರೆ. ದಿನವೂ ಬಂದು ಈ ಹುಡುಗನಿಗೆ ಟಾರ್ಚರ್ ಕೊಟ್ಟಿದ್ದಾರೆ. ಹೀಗಾಗಿ ವಿನೋದ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು'' ಎಂದರು.
ಇದನ್ನೂ ಓದಿ: ಕಲಬುರಗಿ: ವರಸೆಯಲ್ಲಿ ಅಣ್ಣ-ತಂಗಿ ಎಂದು ಮದುವೆಗೆ ಪೋಷಕರ ವಿರೋಧ; ವಿವಾಹವಾಗಿ ಪ್ರೇಮಿಗಳು ಆತ್ಮಹತ್ಯೆ