ಬೆಂಗಳೂರು: ರಾಜ್ಯಾದ್ಯಂತ ನಂದಿನಿ ಹಾಲಿನ ಬೆಲೆ ಏರಿಕೆ ಮಾಡಲಾಗಿದೆ. ಪ್ರತಿ ಲೀಟರ್ಗೆ 2 ರೂಪಾಯಿ ಹೆಚ್ಚಿಸಲಾಗಿದೆ. ಇದೇ ವೇಳೆ, 1 ಲೀಟರ್, ಅರ್ಧ ಲೀಟರ್ ಹಾಲಿನ ಜೊತೆ 50 ಎಂಎಲ್ ಹೆಚ್ಚುವರಿ ಹಾಲು ನೀಡಲು ನಿರ್ಧರಿಸಲಾಗಿದೆ. ಪರಿಷ್ಕೃತ ದರ ನಾಳೆ(ಜೂ. 26)ಯಿಂದಲೇ ಜಾರಿಗೆ ಬರಲಿದೆ.
ಹಾಲಿನ ದರ ಹೆಚ್ಚಳದ ಬಗ್ಗೆ ಕರ್ನಾಟಕ ಸಹಕಾರ ಉತ್ಪಾದಕ ಮಹಾಮಂಡಳ ನಿಯಮಿತವು ಅಧಿಕೃತವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ರಾಜ್ಯದ 27 ಲಕ್ಷಕ್ಕೂ ಹೆಚ್ಚು ಹೈನುಗಾರರಿಂದ ಹಾಲು ಖರೀದಿಸಿ, ಸಂಸ್ಕರಿಸಿ, 'ಗೋವಿನಿಂದ ಗ್ರಾಹಕರವರೆಗೆ' ಎಂಬ ಶೀರ್ಷಿಕೆಯನ್ನು ಹೊತ್ತು 'ನಂದಿನಿ' ಬ್ರ್ಯಾಂಡ್ನಲ್ಲಿ ಉತ್ಕೃಷ್ಟ ಗುಣಮಟ್ಟದ ವಿವಿಧ ಮಾದರಿಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಪರಿಚಯಿಸುತ್ತಿದೆ.
ಪ್ರಸ್ತುತ ಸುಗ್ಗಿ ಕಾಲವಾಗಿರುವುದರಿಂದ ಎಲ್ಲ ಜಿಲ್ಲಾ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಹಾಲಿನ ಶೇಖರಣೆಯು ಪ್ರತಿ ದಿನ ಹೆಚ್ಚಾಗುತ್ತಿದ್ದು, ಪ್ರಸ್ತುತ ಶೇಖರಣೆಯೂ ಒಂದು ಕೋಟಿ ಲೀಟರ್ಗಳ ಹತ್ತಿರ ತಲುಪಿರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಹೆಚ್ಚುವರಿಯಾಗಿ ಪ್ರತಿ ಅರ್ಧ ಲೀಟರ್ (500 ಎಂಎಲ್) ಮತ್ತು ಒಂದು ಲೀಟರ್ (1000 ಎಂಎಲ್) ಪ್ಯಾಕೆಟ್ಗಳಿಗೆ ಮಾತ್ರ 50 ಮಿಲಿ ಲೀಟರ್ ಹಾಲನ್ನು ಹೆಚ್ಚುವರಿ ನೀಡುವುದರೊಂದಿಗೆ ಪ್ರತಿ ಪ್ಯಾಕೆಟ್ಗಳ ದರವನ್ನು 2 ರೂಪಾಯಿಯಂತೆ ಹೆಚ್ಚಳ ಮಾಡಲಾಗುತ್ತಿದೆ ಎಂದು ಕೆಎಂಎಫ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ನಂದಿನಿ ಹಾಲಿನ ವಿವಿಧ ಮಾದರಿಗಳ ಪ್ರಮಾಣ ಹಾಗೂ ಹೊಸ ದರದ ಮಾಹಿತಿ ಇಲ್ಲಿದೆ.
ಕೆಎಂಎಫ್ ಅಧ್ಯಕ್ಷರ ಸಮರ್ಥನೆ: ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, ದರ ಹೆಚ್ಚಳದ ಬಗ್ಗೆ ಮಾಹಿತಿ ನೀಡಿದರು. ಒಂದು ಲೀಟರ್ ಮತ್ತು ಅರ್ಧ ಲೀಟರ್ ನಂದಿನಿ ಹಾಲಿನ ಪ್ಯಾಕೆಟ್ಗೆ 50 ಎಂಎಲ್ ಹಾಲು ಹೆಚ್ಚುವರಿಯಾಗಿ ಸೇರಿಸಲಾಗುವುದು. ಪ್ರಸ್ತುತ ಲೀಟರ್ ಹಾಲಿಗೆ 42 ರೂ. ಇದ್ದು, ಇದಕ್ಕೆ 2 ರೂ. ಹೆಚ್ಚಳ ಮಾಡಲಾಗುವುದು. ಈ ಪರಿಷ್ಕೃತ ದರಗಳು ಹಾಲಿಗೆ ಮಾತ್ರ ಅನ್ವಯವಾಗಲಿದೆ. ನಂದಿನಿಯ ಉತ್ಪನ್ನಗಳಾದ ಮೊಸರು, ಲಸ್ಸಿ, ಇತರ ಉತ್ಪನ್ನಗಳಲ್ಲಿ ಏರಿಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಮೊಸರು, ಲಸ್ಸಿ, ಇತರ ಉತ್ಪನ್ನದ ಬೆಲೆ ಏರಿಕೆ ಇಲ್ಲ: ಇದೇ ವೇಳೆ, ಇತರ ರಾಜ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕದಲ್ಲಿ ಹಾಲಿನ ದರ ಕಡಿಮೆ ಇದೆ. ಕೇರಳದಲ್ಲಿ ಒಂದು ಲೀಟರ್ ಹಾಲಿನ ಬೆಲೆ 52 ರೂಪಾಯಿ ಇದೆ. ಗುಜರಾತ್ನಲ್ಲಿ ಅಮುಲ್ ಒಂದು ಲೀಟರ್ಗೆ 56 ರೂ., ಮಹಾರಾಷ್ಟ್ರದಲ್ಲಿ 56 ರೂ., ದೆಹಲಿ ಮದರ್ ಡೈರಿಯ ಹಾಲಿನ ಬೆಲೆ 54 ರೂ. ಇದೆ. ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ 16 ರೂ. ಕಡಿಮೆ ಇದೆ ಎಂದು ಎಂದು ಭೀಮಾ ನಾಯ್ಕ್ ಸಮರ್ಥಿಸಿಕೊಂಡರು.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿ: ರಾಜ್ಯದಲ್ಲಿ ಸದ್ಯಕ್ಕೆ ನಂದಿನಿ ಹಾಲಿನ ದರ ಏರಿಕೆ ಮಾಡುವ ಯಾವುದೇ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದು ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಕೆಲ ತಿಂಗಳ ಹಿಂದೆ ಹೇಳಿದ್ದರು. ಆದರೆ, ಇದೀಗ ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಹಾಲಿನ ದರ ಏರಿಕೆ ಮಾಡಿರುವುದಕ್ಕೆ ಪ್ರತಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
''ತುರ್ತು ಪರಿಸ್ಥಿತಿ ಹೇರಿಕೆಯ ವಾರ್ಷಿಕೋತ್ಸವ ಸಂಭ್ರಮಿಸಲು ಕಾಂಗ್ರೆಸ್ ಸರ್ಕಾರ ನಂದಿನಿ ಹಾಲಿನ ದರವನ್ನ ಲೀಟರ್ಗೆ ಎರಡು ರೂಪಾಯಿ ಹೆಚ್ಚಳ ಮಾಡಿ ವಿಕೃತ ಸಂತೋಷ ಅನುಭವಿಸುತ್ತಿದೆ. ಸಿಎಂ ಸಿದ್ದರಾಮಯ್ಯನವರೇ, ತಾವು ಅಧಿಕಾರಕ್ಕೆ ಬಂದ ಮೇಲೆ ಕೇವಲ 13 ತಿಂಗಳಿನಲ್ಲಿ ಹಾಲಿನ ದರವನ್ನ ಎರಡು ಬಾರಿ ಹೆಚ್ಚಿಸಿದ್ದೀರಿ. ಕಳೆದ ವರ್ಷ ಆಗಸ್ಟ್ನಲ್ಲಿ 3 ರೂಪಾಯಿ ಹೆಚ್ಚಳವಾಗಿದ್ದ ಹಾಲಿನ ಬೆಲೆ ಈಗ ಮತ್ತೊಮ್ಮೆ 2 ರೂಪಾಯಿ ಹೆಚ್ಚಾಗಿದೆ. ರಾಜ್ಯದ ಬಡವರು, ಮಧ್ಯಮ ವರ್ಗದ ಜನ ಈಗಾಗಲೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಗಗನಕ್ಕೇರಿರುವ ತರಕಾರಿ ಬೆಲೆಗಳಿಂದ ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಾಲಿನ ದರ ಏರಿಸಿ ಮತ್ತೊಮ್ಮೆ ಬಡವರ ಗಾಯದ ಮೇಲೆ ಬರೆ ಎಳೆದಿದ್ದೀರಿ. ನಿಮಗೆ ಬಡವರು, ಮಧ್ಯಮ ವರ್ಗದ ಜನರ ಮೇಲೆ ಕಿಂಚಿತ್ತಾದರೂ ಕನಿಕರ ಇದ್ದರೆ, ಈ ಕೂಡಲೇ ಹಾಲಿನ ದರ ಏರಿಕೆ ಆದೇಶವನ್ನು ಹಿಂಪಡೆಯಿರಿ'' ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಹೆಚ್ಚಿನ ಆದಾಯ ಸಂಗ್ರಹಕ್ಕೆ ತೈಲ ಬೆಲೆ ಏರಿಸಿದ ಸರ್ಕಾರ: ಅಷ್ಟಕ್ಕೂ ತೈಲ ಮಾರಾಟ ಮೇಲಿನ ತೆರಿಗೆ ಸಂಗ್ರಹದ ಸ್ಥಿತಿಗತಿ ಏನಿದೆ?