ತುಮಕೂರು: ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ 'ಸಂವಿಧಾನ ಜಾಗೃತಿ ಜಾಥಾ' ಕಾರ್ಯಕ್ರಮದ ಪ್ರಯುಕ್ತ 1,35,000 ಏಕ ಬಳಕೆ ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ 'ನಮ್ಮ ಸಂವಿಧಾನ' ಎಂಬ ಪದದ ವಿಶೇಷ ಆಕೃತಿಯನ್ನು ನಿರ್ಮಿಸಲಾಗಿದೆ. ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜನವರಿ 26ರಿಂದ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರಲ್ಲಿ ಸಂವಿಧಾನದ ಮಹತ್ವದ ಬಗ್ಗೆ ವಿನೂತನವಾಗಿ ಅರಿವು ಮೂಡಿಸುವುದು ಇದರ ಉದ್ದೇಶ.
ಸುಮಾರು 305 ವಿದ್ಯಾರ್ಥಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ/ಸಿಬ್ಬಂದಿ ವರ್ಗದವರು ಸೇರಿ ಫೆಬ್ರವರಿ 4ರಂದು ಬೆಳಿಗ್ಗೆ 11ರಿಂದ ರಾತ್ರಿ 7.30ರವರೆಗೆ ಪ್ಲಾಸ್ಟಿಕ್ ಬಾಟಲಿಗಳನ್ನು ಜೋಡಿಸಿ ವಿಶೇಷ ಆಕೃತಿಯನ್ನು ಮೂಡಿಸಿದ್ದಾರೆ. ಮೊದಲಿಗೆ ಕ್ಯಾಡ್ ವಿನ್ಯಾಸದಲ್ಲಿ ತಯಾರಿಸಿ 270x40 ಅಡಿ ಅಳತೆಯಲ್ಲಿ ಬಾಟಲಿಗಳನ್ನು ಜೋಡಿಸಲಾಗಿದೆ. ಈ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸುವ ಪ್ರಯತ್ನವೂ ನಡೆದಿದೆ.
"ವಿನೂತನ ಜಾಥಾ ಕಾರ್ಯಕ್ರಮ ಆಯೋಜಿಸಿ ಜನಸಾಮಾನ್ಯರಿಗೆ ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು, ಸಾಮಾಜಿಕ ಸಮಾನತೆಯ ಬಗ್ಗೆ ಅರಿವು ಮೂಡಿಸಬೇಕು. ಫೆಬ್ರವರಿ 23ರವರೆಗೆ ಜಾಗೃತಿ ಜಾಥಾ ನಡೆಯಲಿದೆ" ಎಂದು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, "ಪ್ರತಿ ಪಂಚಾಯತಿಯಲ್ಲಿಯೂ ಸ್ತಬ್ಧಚಿತ್ರ ವಾಹನವನ್ನು ಪೂರ್ಣ ಕುಂಭಗಳಿಂದ ಬರಮಾಡಿಕೊಂಡು ಸಂವಿಧಾನ ರಚನೆಗೆ ಡಾ.ಬಿ.ಆರ್.ಅಂಬೇಡ್ಕರ್ ಶ್ರಮವನ್ನು ಸ್ಮರಿಸುತ್ತಾ ಗೌರವದಿಂದ ಮುಂದಿನ ಗ್ರಾಮ ಪಂಚಾಯತಿಗೆ ಬೀಳ್ಕೊಡಲಾಗುತ್ತಿದೆ. ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಸ್ಥಳೀಯ ಜನಪ್ರತಿನಿಧಿಗಳೂ ಭಾಗಿಯಾಗುತ್ತಿದ್ದಾರೆ. ಜನರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ" ಎಂದು ಹರ್ಷ ವ್ಯಕ್ತಪಡಿಸಿದರು.
"ಜಾಗೃತಿ ಜಾಥಾ ಸ್ತಬ್ಧಚಿತ್ರ ವಾಹನ ಈವರೆಗೆ ಜಿಲ್ಲೆಯ 130 ಗ್ರಾಮ ಪಂಚಾಯತಿ ಹಾಗೂ 4 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸಿದೆ. ತುಮಕೂರು ತಾಲೂಕು, ಚಿಕ್ಕನಾಯಕನಹಳ್ಳಿ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸಿ ಕುಣಿಗಲ್ ಹಾಗೂ ಶಿರಾ ತಾಲೂಕಿನಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ" ಎಂದು ಅವರು ಮಾಹಿತಿ ನೀಡಿದರು.
ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ 'ನಮ್ಮ ಸಂವಿಧಾನ' ವಿಶೇಷ ಆಕೃತಿಗೆ ಶಾಲಾ ಮಕ್ಕಳು ಗೌರವ ಸಮರ್ಪಿಸಿದರು. ನಗರದ ಸಿದ್ಧಗಂಗಾ ಪ್ರೌಢಶಾಲೆ, ಸಿದ್ಧಗಂಗಾ ಪ್ರಾಥಮಿಕ ಶಾಲೆ, ಚೇತನ ವಿದ್ಯಾಮಂದಿರ, ಸಿಲ್ವರ್ ಜ್ಯೂಬಿಲಿ ಶಾಲೆ, ವಿವೇಕಾನಂದ ಶಾಲೆ, ಕಾರ್ಮೆಲ್ ಶಾಲೆ, ಚೈತನ್ಯ ಟೆಕ್ನೋ, ಸುಮತಿ ಶಾಲೆ, ಸೀತಾ ಪ್ರೌಢಶಾಲೆ, ಬಿ.ಎ.ಗುಡಿಪಾಳ್ಯ ಹಾಗೂ ಹನುಮಂತಪುರದ ಸರ್ಕಾರಿ ಶಾಲೆಗಳ ಸುಮಾರು 2,000 ವಿದ್ಯಾರ್ಥಿಗಳು ನಮ್ಮ ಸಂವಿಧಾನ ಆಕೃತಿ ಸುತ್ತಲೂ ಸರಣಿಯಲ್ಲಿ ನಿಂತು ಗೌರವ ಸಲ್ಲಿಸಿ ಸಂವಿಧಾನ ಪೀಠಿಕೆ ಓದುವ ಮೂಲಕ ವಿನೂತನ ಪ್ರಯತ್ನಕ್ಕೆ ಸಾಕ್ಷಿಯಾದರು. ಡ್ರೋಣ್ ಕ್ಯಾಮರಾದಲ್ಲಿ ವಿಶೇಷ ಆಕೃತಿಯನ್ನು ಸೆರೆಹಿಡಿಯಲಾಯಿತು.
ಇದನ್ನೂ ಓದಿ: 'ಶಾಲೆಗೆ ಬರುವಾಗ ಪ್ಲಾಸ್ಟಿಕ್ ಬಾಟಲಿ ತರಲ್ಲ':ಧಾರವಾಡದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಜ್ಞೆ