ಬೆಂಗಳೂರು: ನಗರದ ಸಾರ್ವಜನಿಕ ಸಾರಿಗೆ ನಮ್ಮ ಮೆಟ್ರೋದಲ್ಲಿ ರೈತನಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ರೈತನೊಬ್ಬ ಕೊಳಕು ಬಟ್ಟೆ ಹಾಕಿದ್ದಾನೆ ಎಂದು ಸಿಬ್ಬಂದಿ ತಡೆದು ನಿಲ್ಲಿಸಿರುವ ಘಟನೆ ನಗರದ ಮೆಟ್ರೋ ನಿಲ್ದಾಣವೊಂದರಲ್ಲಿ ಕಂಡು ಬಂದಿದೆ.
ದೇಶದ ಬೆನ್ನೆಲುಬಾದ ರೈತನಿಗೆ ಬೆಂಗಳೂರಿನ ರಾಜಾಜಿನಗರ ಮೆಟ್ರೋದಲ್ಲಿ ಅವಮಾನವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಟಿಪ್ಟಾಪ್ ಆಗಿ ಡ್ರೆಸ್ ಹಾಕಿಕೊಂಡರೆ ಮಾತ್ರ ಮೆಟ್ರೋದೊಳಗೆ ಬಿಡ್ತಾರಾ?, ಹಾಗಾದರೆ ಬಡವರಿಗೆ ಮೆಟ್ರೋ ಪ್ರಯಾಣ ಸೇವೆ ಸಿಗುವುದಿಲ್ಲವೇ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಜನರು ಪ್ರಶ್ನೆ ಮಾಡಿ, ಮಾತನಾಡಿಕೊಳ್ಳುತ್ತಿದ್ದಾರೆ. ಬಟ್ಟೆ ಕ್ಲೀನ್ ಇಲ್ಲ ಎಂದು ರೈತನನ್ನು ಮೆಟ್ರೋ ಒಳಗೆ ಬಿಡದ ರಾಜಾಜಿನಗರ ನಮ್ಮ ಮೆಟ್ರೋ ಸಿಬ್ಬಂದಿಯ ಅತಿರೇಕದ ವರ್ತನೆ ವಿರುದ್ಧ ಸಾರ್ವಜನಿಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೆಟ್ರೋ ಇರುವುದು ವಿವಿಐಪಿಗಳಿಗೆ ಮಾತ್ರವೇ? - ಜನರ ಪ್ರಶ್ನೆ: ಮೆಟ್ರೋ ಎಂದರೆ ವಿಐಪಿಗಳಿಗೆ ಮಾತ್ರ ಇರುವುದಾ?, ಒಳ್ಳೆ ಬಟ್ಟೆ ಹಾಕೊಂಡು ಬಂದವರಿಗೆ ಮಾತ್ರವೇ ಅವಕಾಶವೇ? ನೀವೇನೂ ಫ್ರೀಯಾಗಿ ಒಳಗೆ ಬಿಡುತ್ತೀರಾ?, ಅವರು ಕಾಸು ಕೊಟ್ಟು ಮೆಟ್ರೋ ಪ್ರಯಾಣ ಬೆಳೆಸಲು ಬಂದಿದ್ದಾರೆ ಎಂದು ಸಿಬ್ಬಂದಿಗಳಿಗೆ ಅಲ್ಲಿದ್ದ ಸಾರ್ವಜನಿಕರು ಕೂಡ ಕ್ಲಾಸ್ ತೆಗೆದುಕೊಂಡಿದ್ದಾರೆ.
ರೈತನಿಗೆ ಅವಮಾನ ಮಾಡಿರುವ ಮೆಟ್ರೋ ಸಿಬ್ಬಂದಿ ವರ್ತನೆಯನ್ನು ಪ್ರಯಾಣಿಕನ ಮೊಬೈಲ್‌ನಲ್ಲಿ ಕೂಡ ಸೆರೆ ಹಿಡಿಯಲಾಗಿದೆ. ರೈತನನ್ನು ಒಳಗೆ ಬಿಡದ ಸಿಬ್ಬಂದಿ ವಿರುದ್ಧ ಸಹ ಪ್ರಯಾಣಿಕರು ಕಿಡಿಕಾರಿ ಕೊನೆಗೆ ಸಿಬ್ಬಂದಿಗೆ ಕೇರ್ ಮಾಡದೇ ರೈತನನ್ನು ಪ್ರಯಾಣಿಕರು ಒಳಗೆ ಕರೆದುಕೊಂಡು ಹೋಗಿದ್ದಾರೆ.
ಸಿಬ್ಬಂದಿ ವಜಾ ಮಾಡಿದ ಬಿಎಂಆರ್ಸಿಎಲ್: ಸಿಬ್ಬಂದಿಗಳ ಅತಿರೇಕದ ವರ್ತನೆಯ ವಿಡಿಯೋವನ್ನು ಸಾರ್ವಜನಿಕರು ಎಕ್ಸ್ ಆ್ಯಪ್ನ ಖಾತೆಗಳಲ್ಲಿ ಹಾಕಿಕೊಂಡು, ಬಿಎಂಆರ್ಸಿಎಲ್ಗೆ ಟ್ಯಾಗ್ ಮಾಡಿ ವಿಐಪಿಗಳಿಗೆ ಮಾತ್ರ ಮೆಟ್ರೋ ಇರುವುದಾ ಎಂದು ಪ್ರಶ್ನೆ ಕೇಳುವ ಮೂಲಕ ಕಿಡಿಕಾರುತ್ತಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗ್ತಿದ್ದು, ಬಿಎಂಆರ್ಸಿಎಲ್ ಇದಕ್ಕೆ ಪ್ರತಿಕ್ರಿಯೆ ನೀಡಿದೆ.
ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆಯಾಗಿದ್ದು, ರಾಜಾಜಿನಗರ ಘಟನೆಯ ಕುರಿತು ತನಿಖೆ ನಡೆಸಲಾಗಿದೆ. ತಪ್ಪು ಕಂಡು ಬಂದ ಹಿನ್ನೆಲೆ ಭದ್ರತಾ ಮೇಲ್ವಿಚಾರಕನನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಿಗಮವು ವಿಷಾದ ವ್ಯಕ್ತಪಡಿಸುತ್ತದೆ ಎಂದು ಎಕ್ಸ್ನಲ್ಲಿ ನಮ್ಮ ಮೆಟ್ರೋ ಪ್ರತಿಕ್ರಿಯೆ ನೀಡಿದೆ.
ಓದಿ: ತೀವ್ರಗೊಂಡ ಮರಾಠ ಮೀಸಲಾತಿ ಪ್ರತಿಭಟನೆ: ಸರ್ಕಾರಿ ಬಸ್‌ಗೆ ಬೆಂಕಿ, ಕರ್ಫ್ಯೂ ಜಾರಿ