ಬೆಂಗಳೂರು: ಲಾಲ್‌ಬಾಗ್ ಪುಷ್ಪ ಪ್ರದರ್ಶನ ಹಾಗೂ ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋದಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚಾಗಿದೆ. ಒಂದೇ ದಿನದಲ್ಲಿ ಗರಿಷ್ಠ ಪ್ರಯಾಣಿಕರ ಸಂಖ್ಯೆ ದಾಖಲಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಬುಧವಾರದಂದು ನಮ್ಮ ಮೆಟ್ರೋ ರೈಲಿನಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಬರೋಬ್ಬರಿ 9.17 ಲಕ್ಷ ಮಂದಿ ಸಂಚರಿಸಿದ್ದಾರೆ. ಇದು ಈವರೆಗಿನ ಅತಿ ಹೆಚ್ಚು ಪ್ರಯಾಣದ ಸಂಖ್ಯೆಯಾಗಿದ್ದು, ಸಾರ್ವಕಾಲಿಕ ದಾಖಲೆಯಾಗಿದೆ. ಮತ್ತೆ ಪ್ರಯಾಣಿಕರು ಕಳೆದ ಒಂದೆರೆಡು ತಿಂಗಳಿನಿಂದ ಕ್ರಮೇಣ ಹೆಚ್ಚಾಗುತ್ತಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ರಜಾದಿನ, ಪುಷ್ಪ ಪ್ರದರ್ಶನ ಹಾಗೂ ರಜೆಗಳಿರುವುದರಿಂದ ಪ್ರಯಾಣಿಕರು ಮತ್ತಷ್ಟು ಏರಿಕೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಆಗಸ್ಟ್ 6ರಂದು ಒಂದೇ ದಿನದಂದು 8.26 ಲಕ್ಷ ಜನರು ಪ್ರಯಾಣಿಸಿರುವುದು ಈವರೆಗಿನ ದಾಖಲೆಯಾಗಿತ್ತು. ಇದೀಗ ಒಂದೇ ವಾರದಲ್ಲಿ ಆ ದಾಖಲೆ ಮುರಿಯಲಾಗಿದೆ. ಇದು ಮೆಟ್ರೋ ಆರಂಭವಾದ ಕಳೆದ ಸುಮಾರು 12 ವರ್ಷಗಳ ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಯಾವ ಮಾರ್ಗದಲ್ಲಿ ಎಷ್ಟು ಜನರ ಪ್ರಯಾಣ?: ಆಗಸ್ಟ್ 14ರಂದು ನಮ್ಮ ಮೆಟ್ರೋ ಮೊದಲ ನೇರಳೆ ಮಾರ್ಗದಲ್ಲಿ 4,43,343 ಮಂದಿ ಪ್ರಯಾಣ ಮಾಡಿದ್ದಾರೆ. ಹಸಿರು ಮಾರ್ಗದಲ್ಲಿ 3,01,775 ಮಂದಿ ಹಾಗೂ ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಒಟ್ಟು 1,67,758 ಜನ ಪ್ರಯಾಣಿಕರು ಸಂಚರಿಸಿದ್ದಾರೆ. ಇದರಿಂದ ಒಂದೇ ದಿನದಲ್ಲಿ ಬರೋಬ್ಬರಿ 2,11,62,300 ರೂ. ಆದಾಯ ಸಂಗ್ರಹವಾಗಿದೆ ಎಂದು ನಮ್ಮ ಮೆಟ್ರೋ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.