ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಚಾರದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಒಂದೇ ದಿನ ನಮ್ಮ ಮೆಟ್ರೋದಲ್ಲಿ 9 ಲಕ್ಷಕ್ಕೂ ಅಧಿಕ ಜನ ಸಂಚಾರ ನಡೆಸಿದ್ದಾರೆ ಎಂದು ಬಿಎಂಆರ್‌ಸಿಎಲ್ ಅಧಿಕೃತ ಮಾಹಿತಿ ನೀಡಿದೆ.
ಒಂದೇ ದಿನ ಗರಿಷ್ಠ ಪ್ರಯಾಣಿಕರು ನಮ್ಮ ಮೆಟ್ರೋ ರೈಲುಗಳಲ್ಲಿ ಸಂಚರಿಸಿದ್ದು, ಡಿಸೆಂಬರ್ 6 ರಂದು ಶುಕ್ರವಾರ 9,20,562 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುವ ಮೂಲಕ ದಾಖಲೆ ಬರೆಯಲಾಗಿದೆ. ಚಲ್ಲಘಟ್ಟದಿಂದ ವೈಟ್‌ಫೀಲ್ಡ್ ನೇರಳೆ ಮಾರ್ಗದಲ್ಲಿ ಒಂದೇ ದಿನ 4,39,616 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಮಾದಾವರ-ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗಿನ ಹಸಿರು ಮಾರ್ಗದಲ್ಲಿ 3,12,248 ಜನರು, ಮೆಜೆಸ್ಟಿಕ್ ಇಂಟರ್‌ಚೇಂಜ್ ನಿಲ್ದಾಣದಿಂದ 1,67,617 ಮಂದಿ ಸಂಚರಿಸಿದ್ದಾರೆ ಎಂದಿದೆ.
ಮೆಟ್ರೋ ಸಂಚಾರ ಮಾರ್ಗ ಬದಲಾಯಿಸಿಕೊಂಡವರು, ಇಲ್ಲಿಂದಲೇ ಸಂಚಾರ ಆರಂಭಿಸಿದ್ದಾರೆ. ನಾಲ್ಕು ದಿಕ್ಕಿನಿಂದ ಇಲ್ಲಿಗೆ ಬಂದು ಇಳಿದವರು ಈ ದಾಖಲೆಯ ಪ್ರಯಾಣದ ಭಾಗವಾಗಿದ್ದಾರೆ. 1081 ಪೇಪರ್ ಟಿಕೆಟ್‌ಗಳು ಮಾರಾಟವಾಗಿವೆ ಎಂದು ಮೆಟ್ರೋ ನಿಗಮ ತಿಳಿಸಿದೆ.
ಆಗಸ್ಟ್ 14 ರಂದು 9.17 ಲಕ್ಷ ಮಂದಿ ಒಂದೇ ದಿನ ಪ್ರಯಾಣ ಮಾಡಿದ್ದು, ಸಾರ್ವಕಾಲಿಕ ದಾಖಲೆಯಾಗಿತ್ತು. ಆದರೆ, ಈ ದಾಖಲೆಯನ್ನು ಡಿಸೆಂಬರ್ 6 ರಂದು ದಾಖಲಾದ ಪ್ರಯಾಣಿಕರ ಸಂಖ್ಯೆ ಮೀರಿಸಿ ಮತ್ತೊಂದು ದಾಖಲೆ ಬರೆಯಲಾಗಿದೆ.
ಈ ವರ್ಷದಲ್ಲಿ ಗರಿಷ್ಠ ದೈನಂದಿನ ಪ್ರಯಾಣಿಕರ ಸಂಖ್ಯೆಯ ದಾಖಲೆಯು ಸೃಷ್ಟಿಯಾಗಿದ್ದು, ಕಳೆದ ಅಕ್ಟೋಬರ್ ತಿಂಗಳಲ್ಲಿ ಮಾಸಿಕವಾಗಿ ಅತ್ಯಧಿಕ ಜನರು ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಆ ತಿಂಗಳಲ್ಲಿ ಬರೋಬ್ಬರಿ 2.38 ಕೋಟಿ ಜನರು ಮೆಟ್ರೋ ಸಾರಿಗೆಯಲ್ಲಿ ಓಡಾಡಿದ್ದಾರೆ. ಇದರಿಂದ ಮೆಟ್ರೋಗೆ 60 ಕೋಟಿಗೂ ಹೆಚ್ಚಿನ ಆದಾಯ ಸಂಗ್ರಹವಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ಡಬಲ್ ಡೆಕ್ಕರ್ ಮೆಟ್ರೋ: ಟೆಂಡರ್ ಕರೆದ ಬಿಎಂಆರ್‌ಸಿಎಲ್