ಮಂಗಳೂರು: ನಗರದ ಕಂಕನಾಡಿ ಸಮೀಪದ ಮಸೀದಿಯೊಂದರ ಮುಂಭಾಗದ ರಸ್ತೆಯಲ್ಲೇ ನಮಾಜ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಠಾಣಾ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿದ್ದರು. ಇದೀಗ ಪೊಲೀಸರು ನಮಾಜ್ ಮಾಡುವವರಿಗೆ ರಸ್ತೆ ಸಂಚಾರಕ್ಕೆ ತಡೆ ಉಂಟುಮಾಡುವ ಯಾವುದೇ ಉದ್ದೇಶ ಇರಲಿಲ್ಲ ಎಂದು ಬಿ ರಿಪೋರ್ಟ್ ನೀಡಿದ್ದಾರೆ.
ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೇ ಸುಮೊಟೊ ಪ್ರಕರಣ ದಾಖಲಿಸಿದ ಕದ್ರಿ ಪೊಲೀಸ್ ನಿರೀಕ್ಷಕರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಲಾಗಿದೆ. ಪ್ರಕರಣದ ವಿಚಾರಣೆಗೆ ಎ.ಸಿ.ಪಿ ದರ್ಜೆಯ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ಮಾಹಿತಿ ನೀಡಿದರು.
ರಸ್ತೆಯಲ್ಲಿ ನಮಾಜ್ ಮಾಡಿದ ಬಳಿಕ ವಿ.ಹಿಂ.ಪ ಮುಖಂಡ ಶರಣ್ ಪಂಪವೆಲ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ, 'ಮಂಗಳೂರಿನ ಕಂಕನಾಡಿ ಬಳಿ ಸಾರ್ವಜನಿಕರಿಗೆ ಉದ್ದೇಶಪೂರ್ವಕವಾಗಿ ತೊಂದರೆ ನೀಡಲು ನಡೆಸಿರುವ ನಮಾಜ್ ಬಗ್ಗೆ ಸಂಬಂಧಪಟ್ಟವರಿಗೆ ಈಗಾಗಲೇ ತಿಳಿಸಲಾಗಿದೆ. ಶುಕ್ರವಾರ ಮತ್ತೆ ಅದೇ ಜಾಗದಲ್ಲಿ ನಮಾಜ್ ನಡೆದರೆ ಬಜರಂಗದಳ ಇದರ ವಿರುದ್ಧ ನೇರ ಕಾರ್ಯಾಚರಣೆ ನಡೆಸಿ ನಿಲ್ಲಿಸುತ್ತದೆ' ಎಂದು ಪೋಸ್ಟ್ ಮಾಡಿದ್ದರು.
ಸುನೀಲ್ ಕುಮಾರ್ ಆಕ್ರೋಶ: ಚನ್ನಗಿರಿ ಠಾಣೆ ಮೇಲಿನ ದಾಳಿ ಆರೋಪಿಗಳಿಗೆ ಕ್ಲೀನ್ ಚಿಟ್ ಹಾಗೂ ಮಂಗಳೂರು ರಸ್ತೆಯಲ್ಲಿ ನಮಾಜ್ ಮಾಡಿದ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕಿರುವ ಬಗ್ಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಆಕ್ರೋಶ: ವ್ಯಕ್ತಪಡಿಸಿದ್ದಾರೆ. ಈ ಎರಡೂ ಪ್ರಕರಣಗಳನ್ನು ನೋಡಿದರೆ ರಾಜ್ಯದಲ್ಲಿ ಜಿಹಾದಿ ಸರ್ಕಾರ ಅಧಿಕಾರದಲ್ಲಿ ಇದೆ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಈಗ ನಡೆಸುತ್ತಿರುವುದು ಸರ್ಕಾರವಲ್ಲ, ತಾಲಿಬಾನ್ ಗಿರಿ ಎಂದು ಅವರು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಪರಾಧ ಕೃತ್ಯ ಅಥವಾ ಕಾನೂನು ಬಾಹಿರ ವರ್ತನೆ ನಡೆಸುವುದು ತಪ್ಪಲ್ಲ ! ಆದರೆ, ಕಾನೂನು ಉಲ್ಲಂಘನೆಯಾಗಿದೆ ಎಂದು ಹೇಳುವುದು ತಪ್ಪು ಎನ್ನುವಂತಾಗಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ಸುನೀಲ್ ಕುಮಾರ್ ಸರ್ಕಾರವನ್ನು ಟೀಕಿಸಿದ್ದಾರೆ.
ಪಂಪ್ವೆಲ್ ಪ್ರಕರಣದಲ್ಲೂ ಹಾಗೆಯೇ ಆಗಿದೆ. ರಸ್ತೆಯಲ್ಲಿ ನಮಾಜ್ ಮಾಡಿ ಸಮಾಜದ ಸ್ವಾಸ್ಥ್ಯ ಹಾಗೂ ಸಾರ್ವಜನಿಕ ಅನಾನುಕೂಲತೆ ಸೃಷ್ಟಿಸಿದವರನ್ನು ಬಂಧಿಸುವುದು ಬಿಟ್ಟು, ಪ್ರಕರಣವನ್ನು ಬೆಳಕಿಗೆ ತಂದ ಶರಣ್ ಪಂಪ್ವೆಲ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಮಾತ್ರವಲ್ಲ ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಅಧಿಕಾರಿಯನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿದೆ ಎಂದು ಸುನೀಲ್ ಕುಮಾರ್ ಆರೋಪಿಸಿದ್ದಾರೆ. ಒಂದು ಸಮುದಾಯದ ಓಲೈಕೆಗಾಗಿ ಇಡಿ ರಾಜ್ಯದ ಹಿತ ಕಡೆಗಣಿಸಲಾಗುತ್ತಿದೆ ಎಂದರೆ ಅದು ಜಿಹಾದಿ ಸರ್ಕಾರದಿಂದ ಮಾತ್ರ ಸಾಧ್ಯ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಈಗ ನಡೆಸುತ್ತಿರುವುದು ಸರ್ಕಾರವಲ್ಲ, ತಾಲೀಬಾನ್ ಗಿರಿ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಇದನ್ನೂ ಓದಿ: ಎರಡು ಸಮುದಾಯಗಳ ನಡುವೆ ಗೊಂದಲ ಆರೋಪ: ಪ್ರಾಧ್ಯಾಪಕನ ವಿರುದ್ಧ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚನೆ - High Court