ಬೆಳಗಾವಿ: ಹಬ್ಬಗಳು ನಮ್ಮ ಮೂಢನಂಬಿಕೆಯ ತಾಣವಾಗಬಾರದು. ಮೂಲ ನಂಬಿಕೆಗಳಾಗಿಯೇ ಅವು ಉಳಿಯಬೇಕು. ಅದೇ ರೀತಿ ಅಂಧಾನುಕರಣೆ ಮಾಡದೇ ಹಬ್ಬದ ಉದ್ದೇಶ ತಿಳಿಯಬೇಕು. ವೈಜ್ಞಾನಿಕ ತಳಹದಿಯ ಮೇಲೆ, ಆಧುನಿಕತೆಗೆ ತಕ್ಕಂತೆ ಹಬ್ಬಗಳನ್ನು ಆಚರಿಸುವ ಅವಶ್ಯಕತೆ ಇದೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.
ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದಲ್ಲಿ ಇಂದು ವಿಶ್ವಗುರು ಬಸವಣ್ಣನವರ 829ನೇ ಲಿಂಗೈಕ್ಯ ವರ್ಷದ ಹಿನ್ನೆಲೆಯಲ್ಲಿ ಬಸವ ಪಂಚಮಿ ನಿಮಿತ್ತ ಅಖಿಲ ಭಾರತ ಲಿಂಗಾಯತ ಮಹಾಸಭಾ, ಸಂಚಾರಿ ಗುರುಬಸವ ಬಳಗದಿಂದ ಮಠದ ನಿಲಯದ ಮಕ್ಕಳಿಗೆ ಉಚಿತ ಪ್ರಸಾದ, ಹಾಲು ವಿತರಿಸಿ ಅವರು ಮಾತನಾಡಿದರು.
ಮೂಢನಂಬಿಕೆ ಎಂದು ಗೊತ್ತಾದ ಮೇಲೆ ಅದೆಷ್ಟೋ ಹಳೆಯ ಆಚರಣೆಗಳನ್ನು ನಾವು ಬದಲಾಯಿಸಿಕೊಂಡಿದ್ದೇವೆ. ಹಾಗಾಗಿ, ಪಂಚಮಿ ನಿಮಿತ್ತ ಹಾಲನ್ನು ಕಲ್ಲಿಗೆ ಎರೆದು ವ್ಯರ್ಥ ಮಾಡುವ ಬದಲು, ಹಸಿದ ಮಕ್ಕಳಿಗೆ ನೀಡುವುದು ಉತ್ತಮ ಕಾರ್ಯ ಎಂದರು.
ಅದೇ ರೀತಿ ರಾಷ್ಟ್ರೀಯ ಬಸವದಳ, ಅಖಿಲ ಭಾರತ ಲಿಂಗಾಯತ ಮಹಾಸಭಾ, ಮಾನವ ಬಂಧುತ್ವ ವೇದಿಕೆ ಸೇರಿ ವಿವಿಧ ಲಿಂಗಾಯತರ ಪರ ಸಂಘಟನೆಗಳ ಆಶ್ರಯದಲ್ಲಿ ಮಹೇಶ ಫೌಂಡೇಶನ್ ಹೆಚ್ಐವಿ ಪೀಡಿತ ಮಕ್ಕಳು ಹಾಗೂ ಬಸವನಕುಡಚಿಯ ಚಿನ್ನಮ್ಮ ಹಿರೇಮಠ ವೃದ್ಧಾಶ್ರಮ ವೃದ್ಧರಿಗೆ ಹಾಲು ವಿತರಿಸಲಾಯಿತು. ಮಹಾಂತೇಶ ನಗರದ ಬಸವಮಂಟಪದಲ್ಲೂ ಬಸವ ಪಂಚಮಿ ಆಚರಿಸಲಾಯಿತು.
ನಾಗದೇವರಿಗೆ ವಿಶೇಷ ಪೂಜೆ: ನೆಹರು ನಗರದಲ್ಲಿ ನಾಗ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪುನಸ್ಕಾರ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ನಾಗದೇವನಿಗೆ ನಾಗಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಸೇರಿ ಮತ್ತಿತರ ಧಾರ್ಮಿಕ ಕಾರ್ಯಗಳು ನಡೆದವು. ತೆಂಗಿನ ಕಾಯಿ ಒಡೆದು ಹಾಲೆರೆದು ಭಕ್ತರು ಪೂಜೆ ಸಲ್ಲಿಸಿದರು.
ದೇವಸ್ಥಾನದ ಅರ್ಚಕ ಸುಜಯ್ ಆಚಾರ್ಯ ಮಾಧ್ಯಮಗಳ ಜೊತೆಗೆ ಮಾತನಾಡಿ, "ಇಡೀ ಭೂಮಂಡಲಕ್ಕೆ ಅಧಿಪತಿ ನಾಗದೇವ. ಹಾಗಾಗಿ, ಇಂದು ನಾಗದೇವರ ವಿಶೇಷ ಆರಾಧನೆ ಮಾಡಲಾಯಿತು. ಕ್ಷೀರಾಭಿಷೇಕ, ರುದ್ರಾಭಿಷೇಕ, ಪ್ರಸನ್ನ ಪೂಜೆ ನೆರವೇರಿಸಿದ್ದು, ನಾಗದೇವರ ನಂಬಿ ಬಂದ ಎಲ್ಲರಿಗೂ ದೇವರ ಅನುಗ್ರಹ ಪ್ರಾಪ್ತವಾಗಲಿ" ಎಂದು ಹಾರೈಸಿದರು.
ಭಕ್ತೆ ವಾಣಿ ಶೆಟ್ಟಿ ಮಾತನಾಡಿ, "ತುಳುನಾಡಿನ ನಮಗೆ ನಾಗರ ಪಂಚಮಿ ಬಹಳ ದೊಡ್ಡ ಹಬ್ಬ. ಕಣ್ಣಿಗೆ ಕಾಣುವ ದೇವರೆಂದರೆ ನಾಗ. ಆಶ್ಲೇಷಾದಲ್ಲಿ ವರ್ಷಪೂರ್ತಿ ಪೂಜೆ ನಡೆಯುತ್ತದೆ. ಬೆಳಗಾವಿಯ ನಾಗದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದೆವು" ಎಂದು ಹೇಳಿದರು.
ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯದಲ್ಲಿ ನಾಗರ ಪಂಚಮಿ ಸಂಭ್ರಮ: ನಾಗರಾಧನೆಗೆ ಪ್ರಸಿದ್ಧಿ ಪಡೆದಿರುವ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.
ಶಿವಮೊಗ್ಗದಲ್ಲಿ ಶ್ರದ್ಧಾ ಭಕ್ತಿಯ ನಾಗರಪಂಚಮಿ: ಮುಂಜಾನೆಯಿಂದಲೇ ನಾಗಕಟ್ಟೆಗೆ ಹಾಲೆರೆಯುತ್ತಿರುವ ದೃಶ್ಯ ಶಿವಮೊಗ್ಗದಲ್ಲಿ ಕಂಡುಬಂತು. ಭಕ್ತರು ಸಮೀಪದ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ಮನೆಗೆ ತೆರಳುತ್ತಿದ್ದರು. ಈ ಹಬ್ಬವನ್ನು ಸಹೋದರ- ಸಹೋದರಿಯರ ಹಬ್ಬ ಎಂದೂ ಕರೆಯುತ್ತಾರೆ.
ಇದನ್ನೂ ಓದಿ: ಕಾರವಾರ: ಮಕ್ಕಳಿಗೆ ಹಾಲು ವಿತರಿಸಿ ನಾಗರಪಂಚಮಿ ಆಚರಿಸಿದ ಜನಶಕ್ತಿ ವೇದಿಕೆ - Nagara Panchami