ಬೆಂಗಳೂರು : ರಾಜ್ಯ ಸರ್ಕಾರದ ಸುತ್ತೋಲೆಯಲ್ಲಾದ ಸಣ್ಣ ತಪ್ಪು ವಿವಾದಕ್ಕೆ ಕಾರಣವಾಗಿ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಈ ವಿವಾದ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ, ಪರಿಷ್ಕೃತ ಆದೇಶ ಹೊರಡಿಸುವ ಭರವಸೆಯ ನೀಡುವುದರ ಜೊತೆಗೆ ಆದೇಶದಲ್ಲಿ ಲೋಪ ಎಸಗಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸದನದ ಒಳಗೆ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಸ್ಪಷ್ಟನೆ ನೀಡಿದರು.
ಇದನ್ನು ಕಂಡ ಸಚಿವರು ಸುತ್ತೋಲೆ ತಿದ್ದುಪಡಿ ಮಾಡಿ, ಹೊಸ ಆದೇಶ ಹೊರಡಿಸಿದ್ದಾರೆ. ಇದೀಗ ಗೊಂದಲ ನಿವಾರಣೆ ಆಗಿದೆ. ಈ ಸುತ್ತೋಲೆ ತಪ್ಪಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಪ್ರತಿಪಕ್ಷದ ಸದಸ್ಯರು ಪ್ರಸ್ತಾಪಿಸಿ, ರಾಷ್ಟ್ರ ಕವಿ, ಜ್ಞಾನಪೀಠ ಪುರಸ್ಕೃತ ಡಾ. ಕುವೆಂಪು ಅವರ ‘ಜಯ ಭಾರತ ಜನನಿಯ ತನುಜಾತೆ’ ಕವನವನ್ನು ‘ನಾಡಗೀತೆ’ಯಾಗಿ ಘೋಷಿಸುವ ಕುರಿತು ಹೊರಡಿಸಲಾದ ಸರ್ಕಾರದ ಆದೇಶ ಹಾಗೂ ಅದಕ್ಕೆ ಫೆಬ್ರವರಿ 16 ರಂದು ಮಾಡಲಾದ ತಿದ್ದುಪಡಿ ಪ್ರಕಾರ, ‘ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು ಎಂಬುದರ ಬದಲಾಗಿ, ‘ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಎಂಬುದಾಗಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಇದು ಒಂದು ರೀತಿ ಅಧಿಕಾರಿಗಳ ಹುಚ್ಚಾಟ. ಸರ್ಕಾರಕ್ಕೂ ಅಧಿಕಾರಿಗಳು ಸಂಬಂಧ ಇಲ್ಲವೇ ಎಂಬಂತೆ ವರ್ತನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಸರ್ಕಾರದ ಈ ಸುತ್ತೋಲೆಯ ವಿರುದ್ಧ ಟೀಕಾ ಪ್ರಹಾರ ನಡೆಸಿದ ಪ್ರತಿಪಕ್ಷದ ನಾಯಕ ಆರ್. ಅಶೋಕ್, ನಾಡಗೀತೆಯನ್ನು ಈ ಶಾಲೆಗಳಲ್ಲಿ ಹಾಡುವುದು ಕಡ್ಡಾಯವಲ್ಲ ಎಂಬ ಆದೇಶ ಹೊರಡಿಸುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮತ್ತೊಮ್ಮೆ ತನ್ನ ಕನ್ನಡ ವಿರೋಧಿ ಧೋರಣೆ ತೋರಿದೆ ಎಂದು ಆರೋಪಿಸಿದರು.
ಎರಡು ದಿನದ ಹಿಂದಷ್ಟೇ ಕುವೆಂಪು ಅವರ 'ಜ್ಞಾನದೇಗುಲವಿದು ಕೈ ಮುಗಿದು ಒಳ ಬನ್ನಿ' ಎಂಬ ಘೋಷವಾಕ್ಯವನ್ನು ಬದಲಿಸುವ ಹುನ್ನಾರ ಬಯಲಾದ ಬೆನ್ನಲ್ಲೇ ಈಗ ನಾಡಗೀತೆ ಕಡ್ಡಾಯವಲ್ಲ ಎನ್ನುವ ಮೂಲಕ ಮತ್ತೊಮ್ಮೆ ರಾಷ್ಟ್ರಕವಿ ಕುವೆಂಪು ಅವರಿಗೆ ಮತ್ತು ಕನ್ನಡಾಂಬೆಗೆ ಅಪಮಾನ ಎಸಗಿದ್ದಾರೆ ಎಂದು ಟೀಕಿಸಿದರು.
ಎಲ್ಲ ಶಾಲೆಗಳಲ್ಲೂ ನಾಡಗೀತೆ ಹಾಡಿಸಲು ಸುತ್ತೋಲೆ: ಈ ವೇಳೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಸುತ್ತೋಲೆಯ ಮುದ್ರಣದಲ್ಲಿ ಲೋಪವಾಗಿದೆ. ನಮಗೆ ಎಲ್ಲ ಶಾಲೆಗಳೂ ಒಂದೇ. ಆದೇಶ ಮಾಡುವಾಗ ಸರ್ಕಾರಿ ಶಾಲೆ, ಅನುದಾನಿತ ಶಾಲೆ ಎಂದು ಮುದ್ರಣ ಮಾಡಿದ್ದಾರೆ. ಅದು ಎಲ್ಲಾ ಶಾಲೆಗಳು ಎಂದು ಮುದ್ರಣ ಮಾಡಿಸುತ್ತೇವೆ. ಎಲ್ಲಾ ಶಾಲೆಗಳಲ್ಲೂ ನಾಡಗೀತೆ ಹಾಡಿಸಲು ಸುತ್ತೋಲೆ ಹೊರಡಿಸುತ್ತೇವೆ. ಸರ್ಕಾರಕ್ಕೆ ಕನ್ನಡದ ಬಗ್ಗೆ ಕಾಳಜಿ ಇದೆ ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ : ನಾಡಗೀತೆ ಸುತ್ತೋಲೆಯಲ್ಲಿ ಪ್ರಿಂಟ್ ಮಿಸ್ಟೇಕ್ ಆಗಿತ್ತು: ಸಚಿವ ತಂಗಡಗಿ ಸ್ಪಷ್ಟನೆ