ಮೈಸೂರು: ಇಲ್ಲಿನ ಭಾರತೀಯ ಭಾಷಾ ಸಂಶೋಧನಾ ಸಂಸ್ಥೆಯಲ್ಲಿ ಸಹೋದ್ಯೋಗಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಮಹಿಳೆಯೊಬ್ಬರು ವಿ.ವಿ.ಪುರಂ ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ. ವಿ.ವಿ.ಪುರಂ ಪೊಲೀಸರು ಈ ಪ್ರಕರಣವನ್ನು ಜಯಲಕ್ಷ್ಮೀಪುರಂ ಠಾಣೆಗೆ ವರ್ಗಾಯಿಸಿದ್ದಾರೆ.
ತನ್ನ ಮೊಬೈಲ್‌ಗೆ ಸಂತೋಷ್ ಕುಮಾರ್ ಎಂಬವರು ಅಶ್ಲೀಲ ಫೋಟೋಗಳನ್ನು ಕಳುಹಿಸುತ್ತಿದ್ದಾರೆ ಎಂದು ಸಂಸ್ಥೆಯಲ್ಲಿ ಹಿರಿಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
₹64 ಲಕ್ಷ ಕಳೆದುಕೊಂಡ ವೃದ್ಧ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ ಲಾಭಗಳಿಸಬಹುದು
ಎಂದು ಖಾಸಗಿ ಕಂಪನಿ ನೀಡಿದ ಸಲಹೆ ನಂಬಿ ವೃದ್ಧರೊಬ್ಬರು 64 ಲಕ್ಷ ರೂ ಕಳೆದುಕೊಂಡಿದ್ದಾರೆ. ಜಯಲಕ್ಷ್ಮೀಪುರಂ ನಿವಾಸಿ ರವಿರಾಮ್ ಚಂದ್ರನ್(76) ಹಣ ಕಳೆದುಕೊಂಡವರು. ಷೇರು ಮಾರುಕಟ್ಟೆ ವಿಚಾರವಾಗಿ ರವಿರಾಮ್ ಚಂದ್ರನ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಖಾಸಗಿ ಕಂಪನಿ ನೀಡಿದ ಸಲಹೆ ಮೇರೆಗೆ 64,01,000 ರೂ.ಯನ್ನು ಹಂತಹಂತವಾಗಿ ಹೂಡಿದ್ದಾರೆ. ಪ್ರಾರಂಭದಲ್ಲಿ 59,302 ರೂ. ಲಾಭ ಬಂದಿದೆ. ನಂತರ ಯಾವುದೇ ಲಾಭ ಬಂದಿರಲಿಲ್ಲ. ಅಲ್ಲದೇ ಹೂಡಿಕೆ ಮಾಡಿದ ಹಣ ಕೂಡ ವಾಪಸ್ ಬಂದಿಲ್ಲ. ಇದರಿಂದ ಅವರಿಗೆ ವಂಚನೆಗೊಳಗಾಗಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನಾನು ಸುರೇಶ್ರನ್ನು ಗುಂಡಿಕ್ಕಿ ಕೊಲ್ಲಿ ಎಂದು ಎಲ್ಲೂ ಹೇಳಿಲ್ಲ, ಪೊಲೀಸರ ನೋಟಿಸ್ಗೆ ಹೆದರಲ್ಲ: ಈಶ್ವರಪ್ಪ