ಮೈಸೂರು: ಕೋವಿಡ್ ನಂತರ ಸಾಂಸ್ಕೃತಿಕ ನಗರಿಯಲ್ಲಿ ಹಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ನೆಲಸಮವಾಗಿವೆ. ಈ ಸಾಲಿಗೆ 'ಸರಸ್ವತಿ ಚಿತ್ರಮಂದಿರ' ಹೊಸ ಸೇರ್ಪಡೆಯಾಗಿದೆ. ಮೈಸೂರಿನಲ್ಲಿ ನೆಲಸಮವಾಗಿರುವ ಚಿತ್ರಮಂದಿರಗಳೆಷ್ಟು? ಎಂಬುದರ ಮಾಹಿತಿ ಇಲ್ಲಿದೆ.
ಸಾಂಸ್ಕೃತಿಕ ನಗರಿಯ ಹೃದಯಭಾಗದಲ್ಲಿರುವ ಪ್ರಸಿದ್ಧ ಹಾಗೂ ನಟ ದರ್ಶನ್ ಅವರ ಅಚ್ಚುಮೆಚ್ಚಿನ 'ಸರಸ್ವತಿ ಚಿತ್ರಮಂದಿರ'ವನ್ನು ಕಳೆದ ದಿನ ನೆಲಸಮ ಮಾಡಲಾಯಿತು. ಕೋವಿಡ್ ಬಳಿಕ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಹಲವು ಸವಾಲುಗಳನ್ನು ಎದುರಿಸಿವೆ. ಪ್ರೇಕ್ಷಕರ ಕೊರತೆ, ಸ್ಥಳೀಯ ಕಾಪೋರೇಷನ್ ಶುಲ್ಕದಲ್ಲಿ ಹೆಚ್ಚಳ, ಮಾಲ್ಗಳ ಸ್ಪರ್ಧೆ ಹೀಗೆ ಕೆಲ ಕಾರಣಗಳಿಂದ ಮೈಸೂರು ನಗರದಲ್ಲಿ ಒಂದೊಂದೇ ಚಿತ್ರಮಂದಿರಗಳು ಬಾಗಿಲು ಮುಚ್ಚುತ್ತಾ ಬಂದಿವೆ. ಆ ಥಿಯೇಟರ್ಸ್ ಜಾಗದಲ್ಲಿ ವಾಣಿಜ್ಯ ಮಾಲ್ಗಳನ್ನು ಕಟ್ಟಲು ಮಾಲೀಕರು ಮುಂದಾಗಿದ್ದಾರೆ.
ದರ್ಶನ್ ಮೆಚ್ಚಿನ ಚಿತ್ರಮಂದಿರ: ನಗರದ ಕೆ.ಜಿ. ಕೊಪ್ಪಲಿನ ಬಳಿಯಿದ್ದ ಚಿತ್ರಮಂದಿರ ದರ್ಶನ್ ಅವರ ಮೆಚ್ಚಿನ ಥಿಯೇಟರ್ ಅಗಿತ್ತು. ನಟನ ಹುಟ್ಟೂರು ಮೈಸೂರು. ಅವರ ಹೊಸ ಚಿತ್ರಗಳು ಮೈಸೂರಿನ ಸರಸ್ವತಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದ್ದವು. ಇಲ್ಲಿ ಸುತ್ತಮುತ್ತ ಹೆಚ್ಚಿನ ಸಂಖ್ಯೆಯ ದರ್ಶನ್ ಅಭಿಮಾನಿಗಳಿದ್ದಾರೆ. ದರ್ಶನ್ ಅವರ ಹಲವು ಚಿತ್ರಗಳು ಇಲ್ಲಿ ನೂರು ದಿನಗಳು ಓಡಿ ಯಶಸ್ವಿಯಾಗಿವೆ. ಸ್ವತಃ ದರ್ಶನ್ ಅವರೇ ಈ ಸಂದರ್ಭಗಳಲ್ಲಿ ಚಿತ್ರಮಂದಿರಗಳಿಗೆ ಆಗಮಿಸಿ ಅಭಿಮಾನಿಗಳನ್ನು ಭೇಟಿ ಮಾಡಿರುವ ಹಲವು ನಿದರ್ಶನಗಳಿವೆ.
ಈ ಚಿತ್ರಮಂದಿರದಲ್ಲಿ ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ಟೈಗರ್ ಪ್ರಭಾಕರ್, ರವಿಚಂದ್ರನ್, ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್, ಸುದೀಪ್ ಸೇರಿದಂತೆ ಹಲವು ಕನ್ನಡ ನಟ-ನಟಿಯರ ಚಿತ್ರಗಳು ಇಲ್ಲಿ ಅರ್ಧ ಶತಕ ಹಾಗೂ ಶತದಿನೋತ್ಸವಗಳನ್ನು ಕಂಡಿವೆ. ಹೆಚ್ಚಾಗಿ ಕನ್ನಡ ಚಿತ್ರಗಳೇ ಪ್ರದರ್ಶನ ಕಂಡಿವೆ.
ಮೈಸೂರಿನಲ್ಲಿ ನೆಲಸಮವಾದ ಚಿತ್ರಮಂದಿರಗಳ್ಯಾವುವು? ಸಾಂಸ್ಕೃತಿಕ ನಗರಿ ಮೈಸೂರು ಕಲೆ, ಸಾಹಿತ್ಯ, ಸಂಸ್ಕೃತಿಗೆ ಹೆಸರಾದ ನಗರ. ಆದ್ರೆ ಕೋವಿಡ್ ನಂತರದ ದಿನಗಳಲ್ಲಿ ಹಲವು ಸಿಂಗಲ್ ಸ್ಕ್ರೀನ್ ಥಿಯೇಟರ್ಗಳು ಪ್ರೇಕ್ಷಕರಿಲ್ಲದೇ ನಷ್ಟ ಅನುಭವಿಸಿವೆ. ನಂತರ, ಮಾಲೀಕರು ತಮ್ಮ ಚಿತ್ರಮಂದಿರಗಳಲ್ಲಿ ಚಿತ್ರಪ್ರದರ್ಶನ ನಿಲ್ಲಿಸಿದರು.
- ರಣಜಿ ಚಿತ್ರಮಂದಿರ
- ಅಪೆರಾ ಚಿತ್ರಮಂದಿರ
- ಶಾಲಿಮಾರ್ ಚಿತ್ರಮಂದಿರ
- ಶ್ರೀನಾಗರಾಜ ಚಿತ್ರಮಂದಿರ
- ರತ್ನ ಚಿತ್ರಮಂದಿರ
- ಶಾಂತಲಾ ಚಿತ್ರಮಂದಿರ
- ಲಕ್ಷ್ಮೀ ಚಿತ್ರಮಂದಿರ
- ಗೋಕುಲ ಚಿತ್ರಮಂದಿರ
- ಗಣೇಶ ಚಿತ್ರಮಂದಿರ
- ಓಲಂಪಿಯಾ ಚಿತ್ರಮಂದಿರ
- ರಿಜೆನ್ಸಿ ಚಿತ್ರಮಂದಿರ
- ಸ್ಟರ್ಲಿಂಗ್ ಚಿತ್ರಮಂದಿರ
- ವಿದ್ಯಾರಣ್ಯ ಚಿತ್ರಮಂದಿರ
- ಚಾಮುಂಡೇಶ್ವರಿ ಚಿತ್ರಮಂದಿರ
- ಉಮಾ ಚಿತ್ರಮಂದಿರ
- ಇದೀಗ ಕೆ.ಜಿ.ಕೊಪ್ಪಲಿನಲ್ಲಿದ್ದ ಸರಸ್ವತಿ ಚಿತ್ರಮಂದಿರ ನೆಲಸಮವಾಗಿದೆ.
ರಾಜಾರಾಮ್ ಹೇಳುವುದೇನು? ಮೈಸೂರಿನ ಗಾಯತ್ರಿ ಚಿತ್ರಮಂದಿರದ ಮಾಲೀಕ ಹಾಗೂ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಲದ ಉಪಾಧ್ಯಕ್ಷ ರಾಜಾರಾಮ್ ಈಟಿವಿ ಭಾರತ ಕನ್ನಡ ಜೊತೆ ಮಾತನಾಡಿ ವಿವರ ನೀಡಿದ್ದಾರೆ. ಮೈಸೂರು ನಗರದಲ್ಲಿ ಒಂದೊಂದೇ ಚಿತ್ರಮಂದಿರಗಳು ಮುಚ್ಚಲು ಪ್ರಮುಖವಾಗಿ ಸರ್ಕಾರ ಚಿತ್ರಮಂದಿರಗಳಿಗೆ ಹೆಚ್ಚಿನ ತೆರಿಗೆ ವಿಧಿಸುತ್ತಿದೆ. ಅದರಲ್ಲೂ ಬೆಂಗಳೂರಿಗೆ ಹೋಲಿಸಿದರೆ, ಮೈಸೂರಿನಿಂದ ಹೆಚ್ಚಿನ ತೆರಿಗೆ ಇದೆ.
ಇದನ್ನೂ ಓದಿ: 'ಬಿಗ್ ಬಾಸ್ ನನ್ನಮ್ಮನ ಅಚ್ಚುಮೆಚ್ಚಿನ ಕಾರ್ಯಕ್ರಮ': ಸುದೀಪ್ ಭಾವುಕ, ಧೈರ್ಯ ತುಂಬಿದ ಸರ್ವರಿಗೂ ಧನ್ಯವಾದ
ಜೊತೆಗೆ, ಕೆಲ ವೈಯುಕ್ತಿಕ ಕಾರಣಗಳಿಂದ ಮೈಸೂರಿನಲ್ಲಿ ಒಂದೊಂದೇ ಚಿತ್ರಮಂದಿರಗಳು ಬಾಗಿಲು ಮುಚ್ಚುತ್ತಿದ್ದು, ಆ ಜಾಗಗಳಲ್ಲಿ ಹೊಸದಾಗಿ ಮಾಲ್ಗಳು ಬರುತ್ತಿವೆ. ರಾಜ್ಯ ಸರ್ಕಾರವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಕಡೆ ಯಾವುದೇ ರೀತಿಯ ರಿಯಾಯಿತಿಗಳನ್ನು ನೀಡುತ್ತಿಲ್ಲ. ಮುಖ್ಯವಾಗಿ ಕೋವಿಡ್ ಕಾಲದಲ್ಲಿ ಚಿತ್ರಮಂದಿರಗಳು ನಷ್ಟದಲ್ಲಿದ್ದವು. ಆ ಸಂದರ್ಭ ಪ್ರೆಕ್ಷಕರಿಲ್ಲದೇ ಚಿತ್ರಮಂದಿರಗಳು ನಷ್ಟ ಅನುಭವಿಸಿದ್ದವು. ಜೊತೆಗೆ, ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳ ಸ್ಪರ್ಧೆ ಎದುರಿಸಲಾಗದೇ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಮುಚ್ಚಿದ್ದವು. ಈಗಲೂ ನೋಡುವ ಜನ ಇದ್ದಾರೆ. ಆದರೆ ಚಿತ್ರಮಂದಿರಗಳು ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿದ್ದು, ಈ ಸಮಸ್ಯೆಗಳನ್ನ ಬಗೆಹರಿಸುವುದು ಮಾಲೀಕರಿಗೆ ಕಷ್ಟವಾಗಿದೆ. ಹಾಗಾಗಿ, ಚಿತ್ರಮಂದಿರಗಳ ಸಹವಾಸವೇ ಬೇಡ ಎಂಬ ತೀರ್ಮಾನಕ್ಕೆ ಬಂದಿರುವ ಚಿತ್ರಮಂದಿರದ ಮಾಲೀಕರು ತಮ್ಮ ಚಿತ್ರಮಂದಿರಗಳನ್ನು ಮುಚ್ಚಿ ಬೇರೆಯವರಿಗೆ ಆ ಜಾಗವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: 'ಬಘೀರ' ಕಲೆಕ್ಷನ್: ಸಿನಿಪ್ರಿಯರಿಂದ ಶ್ರೀಮುರಳಿ, ರುಕ್ಮಿಣಿ ವಸಂತ್ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್