ಮೈಸೂರು: ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಇಂದು ಎಫ್ಐಆರ್ ದಾಖಲಾಗಿದೆ. ಮಂಗಳವಾರ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಕಾನೂನು ಹೋರಾಟ ಮಾಡುತ್ತೇನೆ: ಈ ಕುರಿತು ಸ್ನೇಹಮಯಿ ಕೃಷ್ಣ ಪ್ರತಿಕ್ರಿಯಿಸಿ, "ನಾನು ಮಾಡಿರುವ ಆರೋಪಗಳಿಗೆ ಸಾಕಷ್ಟು ಸಾಕ್ಷಿಗಳಿವೆ. ನಾನು ಸುಳ್ಳು ಆರೋಪ ಮಾಡಿಲ್ಲ, ಇಂತಹ ದೂರುಗಳಿಗೆ ನಾನು ಹೆದರಿಕೊಳ್ಳುವುದಿಲ್ಲ. ಈ ಸಂಬಂಧ ನಾನು ಕಾನೂನು ಹೋರಾಟ ಮಾಡುತ್ತೇನೆ. ನಾನು ಮುಡಾ ಅಕ್ರಮಗಳ ಬಗ್ಗೆ ನೀಡಿರುವ ದೂರಿನ ಜೊತೆಗೆ ಸಾಕಷ್ಟು ಸಾಕ್ಷ್ಯಾಧಾರಗಳನ್ನು ನೀಡಿದ್ದೇನೆ. ನನ್ನ ವಿರುದ್ಧ ಸುಳ್ಳು ದೂರು ನೀಡಿರುವ ಲಕ್ಷ್ಮಣ್ಗೆ ಶಿಕ್ಷೆ ಆಗುತ್ತದೆ ಎಂದರು.
ಈ ಪ್ರಕರಣದಲ್ಲಿ ಸಿಎಂ ಪತ್ನಿ ಪಾರ್ವತಿ ಹಾಗೂ ವಿಶೇಷ ತಹಶೀಲ್ದಾರ್ ಅವರನ್ನು ತನಿಖೆಗೆ ಒಳಪಡಿಸಿದರೆ ಸತ್ಯಾಂಶ ಹೊರಬರುತ್ತದೆ. ನಾನು ಸಹ ಕಾನೂನು ಹೋರಾಟ ನಡೆಸುತ್ತೇನೆ, ಹೆದರಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಎಂ. ಲಕ್ಷ್ಮಣ್ ಆರೋಪ ಏನು? ಸ್ನೇಹಮಯಿ ಕೃಷ್ಣ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡಿ ಅಪಪ್ರಚಾರ ಮಾಡುತ್ತಿದ್ದಾರೆ. ಈ ಸಂಬಂಧ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮೈಸೂರಿನ ದೇವರಾಜ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ: ಬೇಲೇಕೇರಿ ಪ್ರಕರಣ: ವಿಶೇಷ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ಅಮಾನತ್ತಿನಲ್ಲಿಟ್ಟ ಹೈಕೋರ್ಟ್