ಮೈಸೂರು: ಕಬಿನಿ ಜಲಾಶಯದಿಂದ ಹೊರ ಹರಿವು ಹೆಚ್ಚಳದಿಂದ ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ಸ್ನಾನಘಟ್ಟ, ಹದಿನಾರು ಕಾಲು ಮಂಟಪ, ಪರಶುರಾಮ ದೇವಾಲಯ ಮತ್ತು ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಹಳ್ಳಿಕೇರಿ, ಹದಿನಾರು ಕಾಲು ಮಂಟಪ, ಸ್ನಾನಘಟ್ಟ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂಜನಗೂಡು ತಾಲೂಕಿನ ಕಡಜಟ್ಟಿ ಗ್ರಾಮ, ಹುಲ್ಲಹಳ್ಳಿ ಸುತ್ತಮುತ್ತಲಿನ ಪ್ರದೇಶಗಳು, ಹುಲ್ಲಹಳ್ಳಿ - ಮೈಸೂರು ಸೇತುವೆ, ಬೊಕ್ಕ ಹಳ್ಳಿ, ಕುಳ್ಳಂಕಯ್ಯನ ಹುಂಡಿ, ಕಪಿಲಾ ನದಿ ಸ್ನಾನಘಟ್ಟಗಳಿಗೆ ತೆರಳಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ನಗರದ ಹಳ್ಳದಕೇರಿ ಬಡಾವಣೆಯಲ್ಲಿ ಮನೆಗಳು ಜಲಾವೃತವಾಗಿದ್ದು, ನಿವಾಸಿ ಮಹಿಳೆಯೊಬ್ಬರು ಜಿಲ್ಲಾಧಿಕಾರಿಗಳ ಬಳಿ ತಮ್ಮ ಅಳಲು ತೋಡಿಕೊಂಡರು. ಈ ಕೂಡಲೇ ನಿವಾಸಿಗಳನ್ನು ಗಿರಿಜಾ ಕಲ್ಯಾಣ ಮಂಟಪಕ್ಕೆ ಸ್ಥಳಾಂತರ ಮಾಡಿ ಅವರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ತಹಶೀಲ್ದಾರ್ಗೆ ಸೂಚಿಸಿದರು. ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ನಗರಸಭಾ ಆಯುಕ್ತ ನಂಜುಂಡಸ್ವಾಮಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕಬಿನಿ, ನುಗು ಜಲಾಶಯಗಳಿಗೆ ಜಿಲ್ಲಾಧಿಕಾರಿ ಭೇಟಿ: ಮತ್ತೊಂದೆಡೆ, ಕಬಿನಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯದಿಂದ ಹೆಚ್ಚು ಪ್ರಮಾಣದ ನೀರು ಹೊರಬಿಡಲಾಗುತ್ತಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಅವರು ಇಂದು ಬೀಚನಹಳ್ಳ ಕಬಿನಿ ಜಲಾಶಯ ಹಾಗೂ ನುಗು ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಪೂರ್ವಭಾವಿಯಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಜನ ಹಾಗೂ ಜಾನುವಾರುಗಳಿಗೆ ತೊಂದರೆ ಆಗದಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ತಾಲೂಕು ಆಡಳಿತದ ಅಧಿಕಾರಿಗಳು ಮುಳುಗಡೆ ಪ್ರದೇಶದ ಜನರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಕಬಿನಿ ಜಲಾಶಯದಿಂದ ನೀರು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿಗಳಾದ ಡಾ ಪಿ.ಶಿವರಾಜು, ಹುಣಸೂರು ಉಪ ವಿಭಾಗಾಧಿಕಾರಿ ವೆಂಕಟರಾಜು ಹಾಗೂ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ನಂಜನಗೂಡು ಪರಶುರಾಮ ದೇಗುಲಕ್ಕೆ ಜಲ ದಿಗ್ಬಂಧನ: ವಿಡಿಯೋ - Nanjangudu Parashurama Temple