ಮೈಸೂರು: ಮೈಸೂರು - ಕೊಡಗು ಎರಡು ಜಿಲ್ಲೆಯ ಮತದಾರರು ನಿಮ್ಮ ಹೆಚ್ಚಿನ ಅಂತರದಿಂದ ಗೆಲ್ಲಿಸುತ್ತಾರೆ. ಚಿಂತೆ ಬೇಡ ಎಂದು ಮಾಜಿ ಸಚಿವ ಸಾರಾ ಮಹೇಶ್ ಅವರು ಯದುವೀರ್ ಒಡೆಯರ್ ಅವರಿಗೆ ಭರವಸೆ ನೀಡಿದರು.
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜವಂಶಸ್ಥ ಯದುವೀರ್ ಒಡೆಯರ್ ಅವರು ಮಾಜಿ ಸಚಿವ ಸಾರಾ ಮಹೇಶ್ ಅವರ ಕಚೇರಿಗೆ ಇಂದು ಭೇಟಿ ನೀಡಿ ಚುನಾವಣೆ ಕುರಿತು ಚರ್ಚಿಸಿದರು. ಈ ವೇಳೆ, ಮಾಜಿ ಸಚಿವ ಸಾರಾ ಮಹೇಶ್ ಅವರು ಮಾತನಾಡಿ, ನಿಮ್ಮನ್ನು ಎರಡು ಜಿಲ್ಲೆಯ ಜನರು ಹೆಚ್ಚು ಮತ ನೀಡಿ ಗೆಲ್ಲಿಸುತ್ತಾರೆ. ನಿಮ್ಮ ಮೇಲೆ ಜನರ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಚಿಂತೆ ಬೇಡ ಮಹಾರಾಜರಿಗಿಂತ ಒಳ್ಳೆಯ ಅಭ್ಯರ್ಥಿಯನ್ನು ಕಾಂಗ್ರೆಸ್ನಿಂದ ಹಾಕಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಮೈಸೂರು ಭಾಗದಲ್ಲಿ ಮಹಾರಾಜರ ವಂಶಸ್ಥರ ನಾಡಿಗೆ ನೀಡಿದೆ ಕೊಡುಗೆ ಅಪಾರವಿದೆ. ಹೀಗಾಗಿ ಜನರು ಈ ಬಾರಿ ಹೆಚ್ಚಿನ ಮತಗಳಿಂದ ಯದುವೀರ್ ಅವರನ್ನು ಗೆಲ್ಲಿಸುತ್ತಾರೆ. ಬಿಜೆಪಿ ಅಭ್ಯರ್ಥಿ ರಾಜವಂಶಸ್ಥರು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಯುವ ನಾಯಕರಾಗಿದ್ದು, ಇಂತಹ ವ್ಯಕ್ತಿಗಳು ಪಾರ್ಲಿಮೆಂಟ್ನಲ್ಲಿ ಇದ್ದರೆ ಚೆಂದ. ರಾಜ್ಯದಲ್ಲೇ ಮೈಸೂರು - ಕೊಡಗು ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕು ಎನ್ನುವುದು ಅವರ ಬಹುದೊಡ್ಡ ಕನಸು ಇದೆ. ಅದನ್ನು ಅವರು ಗೆದ್ದು ನೆರವೇರಿಸುತ್ತಾರೆ ಎಂದು ಹೇಳಿದರು.
ಹಿಂದಿನ ಅಭ್ಯರ್ಥಿಯಾಗಿದ್ದವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಹಾಗೂ ಬಿಜೆಪಿ ಪಕ್ಷದ ನಾಯಕರ ಸಹಕಾರದಿಂದ ಚುನಾವಣೆಯಲ್ಲಿ ಆಯ್ಕೆಯಾಗಿ ಬರುತ್ತಾರೆ. ಆದರೆ, ಈ ಬಾರಿ ವಿಶೇಷ ಎಂದರೆ ಪ್ರಧಾನಿ ನರೇಂದ್ರ ಮೋದಿಯವರು, ಎಚ್ ಡಿ ದೇವೇಗೌಡರು, ಯಡಿಯೂರಪ್ಪ ಅವರು, ಕುಮಾರಣ್ಣವರು ಸೇರಿ ಕೊಡುಗೆಯನ್ನು ಕೊಟ್ಟಿದ್ದವರಿಗೆ, ಏನಾದರೂ ಕೊಡುಗೆ ನೀಡಬೇಕು ಎಂದು ನಿರ್ಧರಿಸಿ, ಮೈಸೂರು ಮಹಾರಾಜರ ಕುಟುಂಬದ ಒಬ್ಬರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದಾರೆ ಎಂದರು.
ಹಿಂದೆ ಬಿಜೆಪಿ ಒಂದೇ ಇತ್ತು, ಇದರೊಂದಿಗೆ ಈ ಬಾರಿ ಜೆಡಿಎಸ್ ಕುಮಾರಣ್ಣನವರ ಕಾರ್ಯಕರ್ತರು ನಿಮ್ಮೆ ಗೆಲುವಿಗೆ ಶ್ರಮಿಸಲಿದ್ದಾರೆ. ಹಿಂದಿನ ಹತ್ತು ವರ್ಷಗಳಲ್ಲಿ ಸಂಸದರಾದಂತಹ ಪ್ರತಾಪ ಸಿಂಹ ಅವರು ಮಾಡಿರುವ ಹತ್ತಾರು ಜನಪರ ಕೆಲಸ, ಕೇಂದ್ರದಿಂದ ತಂದಿರುವ ಅನೇಕ ಯೋಜನೆಗಳು ನಿಮ್ಮ ಜೊತೆಯಲ್ಲಿ ಇವೆ. ಹೀಗಾಗಿ ಈ ಸಲ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಹೆಚ್ಚು ಅಂತರದಿಂದ ಸುಲಭವಾಗಿ ಗೆಲವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯದುವೀರ್ ಒಡೆಯರ್ ಅವರು ಹೇಳಿದ್ದೇನು: ಮಾಜಿ ಶಾಸಕ ಸಾರಾ ಮಹೇಶ್ ಭೇಟಿಯಾದ ಬಳಿಕ ಯದುವೀರ್ ಒಡೆಯರ್ ಮಾತನಾಡಿ, ನನ್ನನ್ನು ಮೈಸೂರು ಸಂಸ್ಥಾನಕ್ಕೆ ದತ್ತು ಸ್ವೀಕಾರದ ಬಳಿಕ ನನಗೆ ಉತ್ತಮ ಬೆಂಬಲ ನೀಡಿದ್ದೀರಿ. ಮಹಾರಾಜರ ಕಾಲದಲ್ಲಿ ಮೈಸೂರು ಸಂಸ್ಥಾನಕ್ಕೆ ಅವರು ನೀಡಿದ್ದ ಕೊಡುಗೆ ಮೇಲೆ ಬಿಜೆಪಿ ನನಗೆ ಟಿಕೆಟ್ ನೀಡಿದೆ. ನಾವೆಲ್ಲರೂ ಶ್ರೇಷ್ಠ ಭಾರತದ ನಿರ್ಮಾಣಕ್ಕಾಗಿ ಕೆಲಸ ಮಾಡೋಣ, ಸದೃಢ ಭಾರತಕ್ಕಾಗಿ, ನೀವು ಮತ ಹಾಕಿ, ನಿಮ್ಮೆಲ್ಲರ ಋಣ ತೋರಿಸೋಕೆ ನಾವು ಬಂದಿದ್ದೇವೆ, ನಾವೆಲ್ಲರೂ ಒಗ್ಗಟ್ಟಿನಿಂದ ದೇಶದ ಅಭಿವೃದ್ಧಿಗೆ ಶ್ರಮಿಸೋಣ. ಮೈಸೂರು- ಕೊಡಗು ಕ್ಷೇತ್ರ ನನಗೇನು ಹೊಸದಲ್ಲ ಎಂದು ಯದುವೀರ್ ಒಡೆಯರ್ ಇದೇ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು.
ಇದನ್ನೂಓದಿ:ನಾನು, ನನ್ನ ಪುತ್ರ ಕಾಂಗ್ರೆಸ್ ಪಕ್ಷಕ್ಕೆ ಸೇರುವುದಿಲ್ಲ: ಶಾಸಕ ಜಿ.ಟಿ. ದೇವೇಗೌಡ