ಮೈಸೂರು: ಮ-ನರೇಗಾ ಕೆಲಸದಲ್ಲಿ ತೊಡಗಿಸಿಕೊಳ್ಳುವ ಕಾರ್ಮಿಕ ಮಹಿಳೆಯರ ಮೂರು ವರ್ಷದ ಒಳಗಿನ ಮಕ್ಕಳನ್ನು ಆರೈಕೆ ಮಾಡುವ ಕೂಸಿನ ಮನೆ ಕೇಂದ್ರ ಜನ ಮೆಚ್ಚುಗೆಗೂ ಪಾತ್ರವಾಗಿದೆ. ಕೂಲಿ ಕಾರ್ಮಿಕ ಮಹಿಳೆಯರ ಮಕ್ಕಳ ಪೋಷಣೆ, ರಕ್ಷಣೆ, ಪಾಲನೆ ಹಾಗೂ ಪೌಷ್ಠಿಕತೆ ಹೆಚ್ಚಳಕ್ಕೆ ಈ ಕೇಂದ್ರ ಬಹುದೊಡ್ಡ ಹೆಜ್ಜೆಯನ್ನಿರಿಸಿದೆ. ಬೆಳಗ್ಗೆ 9 ರಿಂದ ಸಂಜೆ 5ರ ವರೆಗೆ ತಮ್ಮ ಮಕ್ಕಳನ್ನು ಕೂಸಿನ ಮನೆಯಲ್ಲಿ ಇರಿಸಿ ನೆಮ್ಮದಿಯಿಂದ ಕೂಲಿ ಮಾಡಬಹುದಾಗಿದೆ.

ಮೈಸೂರು ಜಿಲ್ಲೆಯಲ್ಲಿ ಈಗಾಗಲೇ 80 ಕಡೆಗಳಲ್ಲಿ ಕೇಂದ್ರ ಪ್ರಾರಂಭವಾಗಿದೆ. ಎಚ್.ಡಿ. ಕೋಟೆಯಲ್ಲಿ 7, ಹುಣಸೂರಿನಲ್ಲಿ 16, ಕೆ.ಆರ್. ನಗರದಲ್ಲಿ 6, ಮೈಸೂರು 12, ನಂಜನಗೂಡು 11, ಪಿರಿಯಾಪಟ್ಟಣ 12, ಸರಗೂರು 6, ತಿ.ನರಸೀಪುರ 10 ಕಡೆಗಳಲ್ಲಿ ಕೂಸಿನ ಮನೆ ಕಾರ್ಯಾರಂಭ ಮಾಡಿ ಮಕ್ಕಳ ಪಾಲನೆ, ಪೋಷಣೆಗೆ ಶ್ರಮಿಸುತ್ತಿವೆ. ಮುಂದಿನ ಮಾರ್ಚ್ ಒಳಗೆ ಜಿಲ್ಲೆಗೆ ನಿಗದಿಪಡಿಸಿರುವ 109 ಕೇಂದ್ರಗಳ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾ ಪಂಚಾಯಿತಿ ಸನ್ನದ್ಧವಾಗಿದೆ. ಕೂಸಿನ ಮನೆ ನಿರ್ವಹಣೆಗಾಗಿ ಸರ್ಕಾರದಿಂದ ಮೈಸೂರು ಜಿಲ್ಲೆಗೆ 1 ಕೋಟಿ 9 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.

ಜಿಲ್ಲಾ ಪಂಚಾಯತ್ ಸಿಇಓ ಹೇಳಿದ್ದೇನು?: ಇದೇ ಸಂದರ್ಭದಲ್ಲಿ ಮಾತನಾಡಿದ ಮೈಸೂರು ಜಿಲ್ಲಾ ಪಂಚಾಯತ್ ಸಿಇಓ ಕೆ.ಎಂ ಗಾಯತ್ರಿ, ಮ-ನರೇಗಾ ಯೋಜನೆಯಲ್ಲಿ ಮಹಿಳಾ ಕೂಲಿಕಾರ್ಮಿಕರಿಗೆ ಸಹಕಾರಿಯಾಗಲು ಈ ಯೋಜನೆ ಜಾರಿಗೆ ತರಲಾಗಿದೆ. ಚಿಕ್ಕ ಮಕ್ಕಳ ತಾಯಂದಿರು ಮಕ್ಕಳ ಲಾಲನೆ-ಪಾಲನೆಯಲ್ಲಿ ತೊಡಗುವುದರಿಂದ ಮನರೇಗಾ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯ. ಪ್ರಸ್ತುತ ಈ ಯೋಜನೆಯು ಮಕ್ಕಳಿಗೆ ಆಶ್ರಯ, ಮಹಿಳಾ ಕೂಲಿಕಾರ್ಮಿಕರಿಗೆ ಕೂಲಿ ಕೆಲಸ ಹಾಗೂ ಆರ್ಥಿಕ ಸ್ವಾವಲಂಬಿಯಾಗಲು ಸಾಧ್ಯವಾಗುತ್ತದೆ ಎಂದು ಸಿಇಓ ಕೆ.ಎಂ ಗಾಯತ್ರಿ ಹೇಳಿದರು.

ಜಾಬ್ ಕಾರ್ಡ್ದಾರರೇ ಆರೈಕೆದಾರರು: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಪಡೆದಿರುವ 10ನೇ ತರಗತಿ ಪಾಸಾಗಿರುವ ಮಹಿಳಾ ಕಾರ್ಮಿಕರೇ ಕೇರ್ ಟೇಕರ್ಸ್ ಆಗಿ ಕೂಸಿನ ಮನೆ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಕೂಸಿನ ಮನೆಯಲ್ಲಿ ಮಕ್ಕಳ ಲಾಲನೆ ಪಾಲನೆ ಕುರಿತು ಈಗಾಗಲೇ ಮೊದಲನೇ ಹಂತದಲ್ಲಿ 351 ಆರೈಕೆದಾರರಿಗೆ ತರಬೇತಿ ನೀಡಲಾಗಿದೆ. ಪ್ರತಿ ಕೇಂದ್ರಕ್ಕೆ ಸುಮಾರು 25 ಮಕ್ಕಳಿಗೆ ಅವಕಾಶವಿದ್ದು, ಪ್ರತಿದಿನ ಕನಿಷ್ಠ 6-7 ಗಂಟೆ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಆರೈಕೆದಾರರದ್ದಾಗಿದೆ. ಮಕ್ಕಳಿಗೆ ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟ, ಸಂಜೆ ಲಘು ಉಪಾಹಾರ ನೀಡಲಾಗುತ್ತಿದ್ದು, ಮಕ್ಕಳ ಹಾಜರಾತಿಯನ್ನೂ ನಿರ್ವಹಿಸಲಾಗುತ್ತಿದೆ. ಪ್ರತಿ ಕೇಂದ್ರಕ್ಕೆ ಆಯಾ ಗ್ರಾ.ಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ 11 ಜನರ ಸಮಿತಿಯೂ ಇರುತ್ತದೆ.

ಸರ್ಕಾರಿ ಕಟ್ಟಡಗಳಲ್ಲೇ ಕೂಸಿನ ಮನೆ ಆರಂಭ: ಎಲ್ಲೆಲ್ಲಿ ಮ-ನರೇಗಾ ಕಾಮಗಾರಿ ಹೆಚ್ಚೆಚ್ಚು ನಡೆಯುತ್ತಿದ್ದು, ಆಯಾ ಭಾಗದಲ್ಲಿನ ಸರ್ಕಾರಿ ಕಟ್ಟಡಗಳಲ್ಲೇ ಕೂಸಿನ ಮನೆgಳು ಸಿದ್ಧಗೊಂಡಿವೆ. ಶಾಲಾ ಕಟ್ಟಡ, ಸಮುದಾಯ ಭವನ, ಗ್ರಾ.ಪಂ ಕಟ್ಟಡ ಸೇರಿ ಇನ್ನಿತರೆ ಸರ್ಕಾರಿ ಕಟ್ಟಡಗಳನ್ನು ಗುರುತಿಸಿ, ಕಟ್ಟಡಗಳಿಗೆ ಹೊಸ ಸ್ವರೂಪ ನೀಡುವ ಮೂಲಕ ಸುಂದರಗೊಳಿಸಲಾಗಿದೆ. ಅಲ್ಲದೇ ಮಕ್ಕಳ ಸ್ನೇಹಿ ಚಿತ್ರಗಳನ್ನು ಬಿಡಿಸಿ ಚಿಣ್ಣರನ್ನು ಆಕರ್ಷಿಸಲಾಗುತ್ತಿದೆ.

ಕೂಸಿನ ಮನೆಯಲ್ಲಿ ಏನೇನಿವೆ: ಶಿಶು ಪಾಲನಾ ಕೇಂದ್ರಗಳನ್ನು ಮಕ್ಕಳ ಸ್ನೇಹಿ ಕೇಂದ್ರಗಳನ್ನಾಗಿ ಮಾಡಿದ್ದು, ಈಗಾಗಲೇ ಕೇಂದ್ರದ ಗೋಡೆಗಳಿಗೆ ಮಕ್ಕಳ ಸ್ನೇಹಿ ಪೇಂಟಿಂಗ್ ಮಾಡಿಸುವ ಮೂಲಕ ಅಂದ ಚೆಂದವನ್ನು ಹೆಚ್ಚಿಸಲಾಗಿದೆ. ಜೊತೆಗೆ ಮಕ್ಕಳ ಆಟೋಟಕ್ಕೆ ಆಟಿಕೆಗಳನ್ನು ಒದಗಿಸಲಾಗಿದ್ದು, ಮಕ್ಕಳು ಕೂಡ ಖುಷಿಯಿಂದ ಆಟವಾಡುತ್ತಿದ್ದಾರೆ. ಚಿಕ್ಕ ಮಕ್ಕಳಿಗೆ ಭದ್ರವಾದ ಭಾವನಾತ್ಮಕ ವಾತಾವರಣವನ್ನು ನಿರ್ಮಿಸಿ ಉಳಿಸಿಕೊಳ್ಳುವಲ್ಲಿ ಕೂಸಿನ ಮನೆಯ ಪಾತ್ರವು ಅತ್ಯಂತ ಮಹತ್ವದ್ದಾಗಿದೆ.
ಓದಿ: ಪ್ರೀಮಿಯಂ ಎಫ್ಎಆರ್ ಖರೀದಿಸಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವ ಮಸೂದೆಗೆ ಅಂಗೀಕಾರ