ಬೆಳಗಾವಿ: "ಮಾನಸಿಕವಾಗಿ ಬೆಳಗಾವಿ ಸುವರ್ಣಸೌಧದಲ್ಲಿದ್ದೇನೆ. ಈಗ ನನ್ನ ಮನಸ್ಸೆಲ್ಲಾ ಕಾಂಗ್ರೆಸ್ ಕಡೆಗಿದೆ" ಎಂದು ಎಸ್.ಟಿ.ಸೋಮಶೇಖರ್ ತಿಳಿಸಿದರು.
ಸುವರ್ಣಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಬಿಜೆಪಿ ಶಾಸಕಾಂಗ ಸಭೆಗೂ ಹೋಗಿದ್ದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಔತಣಕೂಟಕ್ಕೂ ಹೋಗಿದ್ದೆ. ಈ ಬಾರಿ ಯಾರು ಕರೆದರೂ ಹೋಗ್ತೇನೆ. ಇವತ್ತು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇದೆ. ಅವರು ಕರೆದ್ರೆ ಹೋವೆ" ಎಂದರು.
"ನಾನು ಅಧ್ಯಕ್ಷರ ಜೊತೆ ಮಾತನಾಡ್ತಿದ್ದೆ. ಹೈಕಮಾಂಡ್ ಜೊತೆ ಒಂದು ತರ ಮಾತನಾಡ್ತಾರೆ. ಮಾಧ್ಯಮಗಳ ಮುಂದೆ ಇನ್ನೊಂದು ರೀತಿ ಹೇಳ್ತಾರೆ. ಅವರ ಮೇಲೆ ಯಾವುದೇ ಕ್ರಮವಿಲ್ಲ. ಅಧಿಕಾರದಲ್ಲಿದ್ದಾಗ ಕಾರ್ಯಕರ್ತರು ನೆನಪಾಗಲ್ಲ. ಮೊದಲು ಅವರ ಮೇಲೆ ಕ್ರಮ ಜರುಗಿಸಲು, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡೋಕೆ ಹೋಗಬೇಡಿ. ಡ್ಯಾಮೇಜ್ ಮಾಡೋರನ್ನು ತಡೆಯಲಿ" ಎಂದು ಹೇಳಿದರು.
"ಒಂದಿಷ್ಟು ಬಿಜೆಪಿಗರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ರಾತ್ರಿ ವೇಳೆ ಭೇಟಿ ಮಾಡ್ತಾರೆ. ಆದರೆ ನಾನು ಡಿಸಿಎಂ ಅವರನ್ನು ರಾತ್ರಿ ಭೇಟಿ ಮಾಡಿಲ್ಲ. ಬೆಳಿಗ್ಗೆಯೇ ಭೇಟಿ ಮಾಡುತ್ತೇನೆ. ವಿಜಯೇಂದ್ರ ನೇರವಾಗಿ ಹೇಳಲಾಗದೆ ನನ್ನ ಹೆಸರು ಹೇಳ್ತಿದ್ದಾರೆ. ಕ್ಷೇತ್ರ ಕೆಲಸದ ವಿಚಾರದಲ್ಲಿ ಸಿಎಂ ಮತ್ತು ಡಿಸಿಎಂ ಭೇಟಿ ಮಾಡಿದ್ದೀನಿ. ನನ್ನ ವಿರುದ್ದ ಯಾವುದೇ ಕ್ರಮ ಕೈಗೊಂಡರೂ ಸ್ವಾಗತಿಸುತ್ತೇನೆ. ನನ್ನ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಕ್ರಮ ಜರುಗಿಸಲು ಹೇಳಿದವರಿಗೆ ತಾಯಿ ಚಾಮುಂಡೇಶ್ವರಿ ಒಳ್ಳೆಯದು ಮಾಡಲಿ" ಎಂದರು.
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ- ಶಾಸಕ ಶಿವರಾಮ್ ಹೆಬ್ಬಾರ್: ಬಿಜೆಪಿಯಿಂದ ನೋಟಿಸ್ ಕೊಡುವ ವಿಚಾರವಾಗಿ ಮಾತನಾಡಿದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್, "ಅಧ್ಯಕ್ಷರ ಜೊತೆ ಏನೂ ಚರ್ಚೆ ಮಾಡಿಲ್ಲ. ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದ್ದಾರೆ. ಅವರೇ ಯೋಚನೆ ಮಾಡಬೇಕು. ನಾವೇನೂ ಅಂತಹ ಕೆಲಸ ಮಾಡಿಲ್ಲ. ಅವರ ಸ್ನೇಹಿತ ಮನಸ್ಸಿಗೆ ಬಂದಂತೆ ಮಾತನಾಡ್ತಾರೆ. ಅವರ ಬಗ್ಗೆ ಯಾವ ಕ್ರಮವೂ ಕೈಗೊಳ್ಳುತ್ತಿಲ್ಲ" ಎಂದು ಪರೋಕ್ಷವಾಗಿ ಯತ್ನಾಳ್ ವಿಚಾರ ಪ್ರಸ್ತಾಪಿಸಿದರು.
"ನಮಗೆ ಇಲ್ಲಿಯವರೆಗೆ ನೋಟಿಸ್ ಕೊಟ್ಟಿಲ್ಲ. ಒಬ್ಬೊಬ್ಬರಿಗೆ ಒಂದೊಂದು ನ್ಯಾಯ ಯಾಕೆ?. ಬೇರೆಯವರು ಮಾಡೋದು ಒಳ್ಳೆಯದಾ?. ನಾನು, ಸೋಮಶೇಖರ್ ಮಾಡಿದ್ರೆ ತಪ್ಪಾ?. ನಾವು 2,000 ಕೋಟಿ ಅಂತ ಏನಾದ್ರೂ ಹೇಳಿದ್ದೇವಾ?. ಅವ(ಯತ್ನಾಳ್) ಪಾರ್ಟಿಗೆ ಎಷ್ಟು ಡ್ಯಾಮೇಜ್ ಮಾಡಿದ್ದಾನೆ. ಯಾಕೆ ಅದರ ಬಗ್ಗೆ ಏನೂ ಮಾತನಾಡ್ತಿಲ್ಲ. ನಾವು ಎಲ್ಲಿಂದ ಗೆದ್ದಿದ್ದೇವೆ ಅಲ್ಲೇ ಇದ್ದೇವೆ. ಯಾರ‍್ಯಾರು ಎಷ್ಟೆಷ್ಟು ಮಾತನಾಡ್ತಿದ್ದಾರೆ. ವಿಧಾನಸಭೆ ಒಳಗೆ ಹೊರಗೆ ಮಾತನಾಡ್ತಾರೆ. ಅದರ ಬಗ್ಗೆ ಯಾಕೆ ಮಾತನಾಡ್ತಿಲ್ಲ. ನಾವು ಕ್ಷೇತ್ರದ ಕೆಲಸ ಆಗಬೇಕು ಅದಕ್ಕೆ ಹೋಗ್ತೇನೆ. ಈಗಲೂ ಹೋಗ್ತೇನೆ ನಾಳೆಯೂ ಹೋಗ್ತೇನೆ" ಎಂದರು.
ಇದನ್ನೂ ಓದಿ: ಸುವರ್ಣಸೌಧದ ಮುಂದೆ ರೈತರ ಪ್ರತಿಭಟನೆ: KSRTC ಬಸ್ ಚಾಲಕರ ಕೈ, ಸ್ಟೇರಿಂಗ್ ಕಟ್ಟಿಹಾಕಿ ಆಕ್ರೋಶ