ಮೈಸೂರು: ''ನನ್ನ ಕೂದಲು ಹಾಗೂ ತಲೆಯೊಳಗಿನ ಮೆದುಳು ಚನ್ನಾಗಿದೆ. ಅವರಂತೆ ನನಗೆ ಯಾವ ದುರ್ಬುದ್ಧಿಯೂ ಇಲ್ಲ ಹಾಗೂ ಅವರಂತೆ ಛೋಟಾ ಸಹಿ ವ್ಯವಹಾರ ಗೊತ್ತಿಲ್ಲ'' ಎಂದು ಬಿಜೆಪಿ ರಾಜಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಟೀಕೆಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ ತಿರುಗೇಟು ನೀಡಿದರು.
ಇಂದು (ಮಂಗಳವಾರ) ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಮರೀತಿಬ್ಬೇಗೌಡ ಪರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ''ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಗಡ್ಡದ ಬಗ್ಗೆ ಮಾತನಾಡಿ ಬಿಜೆಪಿಯವರು 130 ಸ್ಥಾನದಿಂದ 60 ಸ್ಥಾನಕ್ಕೆ ಬಂದಿದ್ದಾರೆ. ಈಗ ನನ್ನ ಕೂದಲಿನ ಬಗ್ಗೆ ಮಾತನಾಡಿ, 26 ಸ್ಥಾನದಿಂದ 6 ಸ್ಥಾನಕ್ಕೆ ಬರುತ್ತಾರೆ ನೋಡಿ'' ಎಂದು ವಾಗ್ದಾಳಿ ನಡೆಸಿದರು.
''ಬಿಜೆಪಿಯವರು ಕೋವಿಡ್ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಗಡ್ಡದ ಬಗ್ಗೆ ಮಾತನಾಡಲಿಲ್ಲ, ಹಾಗೂ ರಾಷ್ಟ್ರಪತಿ ಅಬ್ದುಲ್ ಕಲಾಂ ಹೇರ್ ಸ್ಟೈಲ್ ಬಗ್ಗೆ ಮಾತನಾಡುವುದಿಲ್ಲ, ನನ್ನ ಹೇರ್ ಸ್ಟೈಲ್ ಬಗ್ಗೆ ಮಾತನಾಡುತ್ತಾರೆ. ನಾನು ಅವರಂತೆ ಶೇ 40ರಷ್ಟು ಕಮಿಷನ್ ಪಡೆದು, ಹೇರ್ ಸ್ಟೈಲ್ ಕಟಿಂಗ್ ಮಾಡಿಸುವ ದುಃಸ್ಥಿತಿ ಬಂದಿಲ್ಲ'' ಎಂದು ಶಿಕ್ಷಣ ಸಚಿವರು ತಿರುಗೇಟು ನೀಡಿದರು.
''ಇನ್ನೂ ನನ್ನ ಕೂದಲು ನನ್ನ ತಲೆಯೊಳಗಿನ ಮೆದುಳು ಎರಡು ಚನ್ನಾಗಿದೆ. ಅವರಂತೆ ನನಗೆ ಯಾವುದೇ ದುರ್ಬುದ್ಧಿಯಿಲ್ಲ, ಛೋಟಾ ಸೈನ್ ಮಾಡುವ ವ್ಯವಹಾರ ನನಗೆ ಗೊತ್ತಿಲ್ಲ. ನನ್ನ ತಂದೆ ನನಗೆ ಒಳೆಯ ಬುದ್ಧಿ ಕಲಿಸಿದ್ದಾರೆ. ನನ್ನ ಹೇರ್ ಸ್ಟೈಲ್ ಬಗ್ಗೆ ನನ್ನ ತಂದೆಗೆ ಬಹಳ ಪ್ರೀತಿ ಇತ್ತು. ನನಗೆ ಅವರೇ ಸ್ಫೂರ್ತಿ, ಅವರಿವರ ಮಾತನ್ನು ನಾನು ಕೇಳುವುದಿಲ್ಲ. ಜೂನ್ 4 ಬರಲಿ, ನಂತರ ವಿಜಯೇಂದ್ರನಿಗೆ ಬೇರೆ ಕೆಲಸ ಕೊಡ್ತೀವಿ'' ಎಂದು ಟೀಕಿಸಿದರು.
ರಾಜ್ಯದಲ್ಲಿ 53,000 ಶಿಕ್ಷಕರ ಕೊರತೆ?: ''ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಗ್ಯಾರಂಟಿ ಯೋಜನೆಗಳೇ ಕಾರಣ. ನಮ್ಮ ಶಿಕ್ಷಣ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳಿವೆ. ರಾಜ್ಯದಲ್ಲಿ 53,000 ಶಿಕ್ಷಕರ ಕೊರತೆ ಇದೆ. ಈಗ 12,000 ಶಿಕ್ಷಕರನ್ನ ನೇಮಕ ಮಾಡಿಲಾಗಿದೆ. ಅನುದಾನಿತ ಶಾಲೆಗಳ 6,000 ಶಿಕ್ಷಕರ ನೇಮಕಾತಿಗೆ ಸೂಚನೆ ನೀಡಲಾಗಿದೆ. ಹಂತ ಹಂತವಾಗಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಶಾಲಾ ಮಕ್ಕಳಿಗೆ ಪೌಷ್ಟಿಕಾಂಶ ಆಹಾರಗಳನ್ನು ನೀಡಲಾಗುವುದು'' ಎಂದರು.
''SSLC ಫೇಲಾದ ವಿದ್ಯಾರ್ಥಿಗಳಿಗೆ ಎರಡು ಬಾರಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಿದ್ದರಿಂದ ಹೆಚ್ಚಿನ ಫಲಿತಾಂಶ ಬಂದಿದೆ. ಎರಡನೇ ಬಾರಿ 42,000 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಈ ನಿರ್ಧಾರದಿಂದ ಶಾಲೆಯಿಂದ SSLC ಫೇಲ್ ಆದ ವಿದ್ಯಾರ್ಥಿಗಳು ಶಾಲೆಯಿಂದ ದೂರ ಉಳಿಯುವುದನ್ನು ತಪ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು'' ಎಂದು ಹೇಳಿದರು.
ಒಂದು ತಿಂಗಳಲ್ಲಿ ಸಮವಸ್ತ್ರ ಹಾಗೂ ಪಠ್ಯ ಪುಸ್ತಕ ವಿತರಣೆ: ''ಶಾಲೆ ಆರಂಭಕ್ಕೂ ಮುನ್ನವೇ ಈಗಾಗಲೇ ಶೇಕಡಾ 95 ರಷ್ಟು ಪಠ್ಯ ಪುಸ್ತಕ ಸಮವಸ್ತ್ರ ವಿತರಣೆ ಮಾಡಲಾಗಿದೆ. ಉಳಿದ ಶೇಕಡಾ 5 ರಷ್ಟನ್ನು ಒಂದು ತಿಂಗಳೊಳಗೆ ಪೂರೈಸಿ, ಈ ತಿಂಗಳಿನಲ್ಲಿ ಶೇಕಡಾ 100 ರಷ್ಟು ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಗುವುದು'' ಎಂದರು.
''ಶಿಕ್ಷಕರಿಗೆ ಚುನಾವಣೆಯಲ್ಲಿ ಮತ ಹಾಕುವಂತೆ ಯಾವುದೇ ಒತ್ತಡ ಹಾಕುವುದಿಲ್ಲ. ಹಿಂದೆ ಈ ಸಿಸ್ಟಂ ಇತ್ತು. ಶಿಕ್ಷಕರ ಮೇಲೆ ಪ್ರಭಾವ ಬಳಸಿ ಮತ ಹಾಕುಸುತ್ತಿದ್ದರು. ಈಗ ಆ ಒತ್ತಡ ಇರಲಿಲ್ಲ. ಯಾರು ಶಿಕ್ಷಣದ ಬಗ್ಗೆ ಕಾಳಜಿ ವಹಿಸುತ್ತಾರೋ ಅವರಿಗೆ ಮತ ನೀಡುತ್ತಾರೆ. ಆದರೆ, ಇತ್ತೀಚೆಗೆ ಕೆಲವು ಶಿಕ್ಷಕರು ರಾಜಕೀಯ ವಿಚಾರದಲ್ಲಿ ಭಾಗಿಯಾಗುತ್ತಾರೆ ಎಂಬ ಮಾಹಿತಿ ಸಿಕ್ಕಿದ್ದು, ಅವರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಈ ವರ್ಷ ಯಾವುದೇ ಪಠ್ಯ ಪುಸ್ತಕಗಳ ಪರಿಸ್ಕರಣೆ ಇಲ್ಲ'' ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.