ಮಂಡ್ಯ: ಮಂಡ್ಯ ಲೋಕಾಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಜೋರಾಗುತ್ತಿದೆ. ಜೆಡಿಎಸ್ - ಬಿಜೆಪಿ ಮೈತ್ರಿ ಮಾಡಿಕೊಂಡ ಹಿನ್ನೆಲೆ ಕ್ಷೇತ್ರದಿಂದ ಕಣಕ್ಕಿಳಿಯಲಿರುವ ಅಭ್ಯರ್ಥಿ ಯಾರೆಂಬ ಕುತೂಹಲ ಜನರಲ್ಲಿ ಮೂಡಿದೆ. ಜೆಡಿಎಸ್ನ ಭದ್ರಕೋಟೆಯಾಗಿರುವ ಮಂಡ್ಯವನ್ನ ಉಳಿಸಿಕೊಳ್ಳಲು ಜೆಡಿಎಸ್ ಕಸರತ್ತು ನಡೆಸುತ್ತಿದೆ. ಈಗಾಗಲೇ ಡಾ.ಸಿ.ಎನ್. ಮಂಜುನಾಥ್ ಅವರನ್ನು ಕ್ಷೇತ್ರದೆಲ್ಲೆಡೆ ಪರಿಚಯಿಸುತ್ತಿದ್ದರೆ ಮತ್ತೊಂದೆಡೆ ಸಂಸದೆ ಸುಮಲತಾ ದೆಹಲಿಗೆ ತೆರಳಿ ಪ್ರಧಾನಿ ಮೋದಿ ಹಾಗೂ ಜೆಪಿ ನಡ್ಡಾರನ್ನ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದೆ ಸುಮಲತಾ, ಈ ಬಾರಿ ಮಂಡ್ಯದಿಂದಲೇ ಚುನಾವಣೆಗೆ ನಿಲ್ಲೋದು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ. 'ನಾನು ನನ್ನ ಟಿಕೆಟ್ಗಾಗಿ ಹೋರಾಟ ಮಾಡುತ್ತಿಲ್ಲ. ನನ್ನ ಹೋರಾಟ ಮಂಡ್ಯಕ್ಕೋಸ್ಕರ. ಈ ಬಾರಿ ನಾನು ಚುನಾವಣೆಗೆ ನಿಲ್ಲೋದು ಖಚಿತ. ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಕೇಳುತ್ತಿದೆ ಎಂಬ ವಿಚಾರದ ಬಗ್ಗೆ ಹೈಕಮಾಂಡ್ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಅಲ್ಲದೇ ಜೆಡಿಎಸ್ ನಿಂದಲೂ ಯಾವುದೇ ಚರ್ಚೆಗಳಾಗಿಲ್ಲ' ಎಂದು ಮಂಡ್ಯ ಸಂಸದೆ ತಿಳಿಸಿದ್ದಾರೆ.
ತಮ್ಮ ಪಕ್ಷದ ಪರವಾಗಿ ಅವರು ಮಾತನಾಡಿ ಬಂದಿರುತ್ತಾರೆ. ಅದರಲ್ಲಿ ತಪ್ಪಿಲ್ಲ. ಆದರೆ ಈ ಎಲ್ಲದರ ಬಗ್ಗೆ ಹೈಕಮಾಂಡ್ ತೀಮಾರ್ನ ಮಾಡಲಿದೆ. ಬಿಜೆಪಿ ಸಂಘಟಿಸಲು ನನ್ನ ಹೋರಾಟ. ಅಧಿಕೃತ ನಿರ್ಧಾರ ಬರೋವರೆಗೂ ಕಾಯೋಣ ಎಂದು ನಿಖಿಲ್ ಕುಮಾರಸ್ವಾಮಿಯವರು ಈ ಭಾಗದ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಮುನ್ನಡೆಯಲ್ಲಿದೆ ಎಂದು ಕೇಂದ್ರಕ್ಕೆ ಹೇಳಿರುವ ವಿಚಾರಕ್ಕೆ ಸುಮಲತಾ ಪ್ರತಿಕ್ರಿಯೆ ನೀಡಿದರು.
ಮತ್ತೊಂದೆಡೆ ಉದ್ಯಮಿಯಾದ ವೆಂಕಟರಮಣೇಗೌಡ ಮತ್ತು ಸ್ಟಾರ್ ಚಂದ್ರು ಎಂಬುವರನ್ನ ಲೋಕಸಭೆ ಅಖಾಡಕ್ಕಿಳಿಸಲು ಕಾಂಗ್ರೆಸ್ ಸಜ್ಜಾಗಿದೆ. ಅದಕ್ಕಾಗಿ ಸ್ಥಳೀಯ ಶಾಸಕರು ಅವರನ್ನು ತಮ್ಮ ಜೊತೆಯಲ್ಲೇ ಗುದ್ದಲಿ ಪೂಜೆಗಳಿಗೂ ಕರೆತಂದು ಪ್ರಚಾರ ನಡೆಸುತ್ತಿದ್ದಾರೆ. ಇತ್ತ ಜೆಡಿಎಸ್ ಮಂಡ್ಯ ಟಿಕೆಟ್ ತಮ್ಮ ಅಭ್ಯರ್ಥಿಗೇ ಸಿಗಲಿದೆ ಎಂದೇಳಿಕೊಂಡು ಡಾಸಿ.ಎನ್ ಮಂಜುನಾಥ್ ಅವರನ್ನ ಮುಂದಿಟ್ಟಿದೆ.
ಸಂಸದೆ ಸುಮಲತಾ ಈಗಾಗಲೇ ದೆಹಲಿಯಲ್ಲಿ ವರಿಷ್ಠರನ್ನ ಭೇಟಿ ಮಾಡಿ ಬಂದಿದ್ದಾರೆ. ಇದಾದ ತಕ್ಷಣ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ತಮ್ಮ ಪುತ್ರ ನಿಖಿಲ್ ಜೊತೆ ದೆಹಲಿಗೆ ತೆರಳಿದ್ದರು. ಒಟ್ಟಾರೆ ಮಂಡ್ಯ ಕ್ಷೇತ್ರದಿಂದ ಲೋಕ ಅಖಾಡಕ್ಕೆ ಯಾರು ಇಳಿಯಲಿದ್ದಾರೆ ಎಂಬುದು ಕಾದು ನೋಡಬೇಕಿದೆ. ಮತ್ತೆ ಈ ಬಾರಿಯೂ ಮಂಡ್ಯ ಲೋಕಸಭೆ ಚುನಾವಣೆ ರಾಜ್ಯ ಮತ್ತು ದೇಶದ ಗಮನ ಸಳೆಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಇದನ್ನೂ ಓದಿ: ಅಭ್ಯರ್ಥಿ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಾವೇ ಮೋದಿ ಎಂದು ಕೆಲಸ ಮಾಡಿ: ಕಾರ್ಯಕರ್ತರಿಗೆ ವಿಜಯೇಂದ್ರ ಕರೆ