ಧಾರವಾಡ: ''ಬಿಜೆಪಿ ಲೋಕಸಭಾ ಅಭ್ಯರ್ಥಿ ಪ್ರಲ್ಲಾದ್ ಜೋಶಿ ಕುರಿತು ದಿಂಗಾಲೇಶ್ವರ ಸ್ವಾಮಿಗಳ ವಿವಾದಾತ್ಮಕ ವೈಯಕ್ತಿಕ ಹೇಳಿಕೆಗೂ ಧಾರವಾಡ ಪ್ರತಿಷ್ಠಿತ ಶ್ರೀ ಮುರುಘಾ ಮಠಕ್ಕೂ ಯಾವುದೇ ಸಂಬಂಧವಿಲ್ಲ ಹಾಗೂ ನಮಗೂ ಒಮ್ಮತವಿಲ್ಲ'' ಎಂದು ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಅಧಿಕೃತ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದ್ದಾರೆ.
''ಪ್ರತಿಷ್ಠಿತ ಶ್ರೀ ಮುರುಘಾ ಮಠ ಲೋಕಕಲ್ಯಾಣಾರ್ಥ ಸ್ಥಾಪನೆಯಾಗಿದೆ. ಮಠದ ಹಿರಿಯ ಶ್ರೀಗಳಾದ ಮದಥಣಿ ಶ್ರೀಗಳು, ಮೃತ್ಯುಂಜಯ ಅಪ್ಪಗೊಳ, ಮಹಾಂತ ಅಪ್ಪಗೊಳ ಹಾಗೂ ಹಲವಾರು ಧೀಮಂತರ ಹಾಗೂ ಭಕ್ತಾಧಿಗಳ ಪರಿಶ್ರಮದ ಫಲದಿಂದ ಸ್ಥಾಪಿತ ಹಾಗೂ ಸರ್ವಸಮಾಜದ ಭಕ್ತರು ನಡೆದುಕೊಳ್ಳುವ ಪವಿತ್ರ ಕ್ಷೇತ್ರವಾಗಿದೆ. ಶ್ರೀ ಕ್ಷೇತ್ರ ವಿದ್ಯಾದಾನ ದಾಸೋಹಕ್ಕೆ ಹಾಗೂ ಸರ್ವಸಮಾಜದ ಏಳಿಗೆಗಾಗಿ ಲಕ್ಷಾಂತರ ವಿದ್ಯಾರ್ಥಿಗಳು ಶ್ರೇಯೋಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ ವೀರಶೈವ ಲಿಂಗಾಯತ ಮಠವಾಗಿದೆ. ಸಹ ಸರ್ವ ಸಮಾಜದ ಭಕ್ತರು ಗದ್ದುಗೆಯ ಆರಾಧಕರಿದ್ದು, ಮಠ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಲ್ಲ'' ಎಂದು ತಿಳಿಸಿದ್ದಾರೆ.
''ಮಠವು ರಾಜಕೀಯ ವಿಷಯಗಳಲ್ಲಿ ಭಾಗವಹಿಸುವುದಿಲ್ಲ. ಯಾವುದೇ ಅಭ್ಯರ್ಥಿ ಆಯ್ಕೆ ಆಯಾ ಪಕ್ಷದ ವರಿಷ್ಠರು ಹಾಗೂ ಅವರ ಪಕ್ಷದ ತೀರ್ಮಾನ. ಇದಕ್ಕೂ ಮಠಮಾನ್ಯಗಳಿಗೂ ಯಾವುದೇ ಸಂಬಂಧವಿಲ್ಲ'' ಎಂದಿದ್ದಾರೆ.
''ಮಾರ್ಚ್ 27ರಂದು ದಿಂಗಾಲೇಶ್ವರ ಸ್ವಾಮೀಜಿ ಮೂರುಸಾವಿರ ಮಠದಲ್ಲಿ ಸ್ವಾಮಿಗಳ ಸಭೆ ಎಂದು ಮಠಕ್ಕೆ ಕರೆದು ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರಲ್ಲಾದ್ ಜೋಶಿಯವರ ಬದಲಾವಣೆ ಕುರಿತು ನೀಡಿದ ಹೇಳಿಕೆ ಶ್ರೀ ದಿಂಗಾಲೇಶ್ವರ ಸ್ವಾಮಿಗಳ ವೈಯಕ್ತಿಕ ಹೇಳಿಕೆಯಾಗಿದೆ. ಈ ಹೇಳಿಕೆ ವಿವಾದಾತ್ಮಕವಾಗಿದ್ದು, ಇದಕ್ಕೂ ನಮಗೂ ಹಾಗೂ ಮುರುಘಾ ಮಠಕ್ಕೆ ಯಾವುದೇ ಸಂಬಂಧವಿಲ್ಲ" ಸ್ಪಷ್ಟಪಡಿಸಿದ್ದಾರೆ.
ದಿಂಗಾಲೇಶ್ವರ ಸ್ವಾಮೀಜಿ ಕರೆದ ಸಭೆಗೆ ಹಾಜರಾಗಿ ಬಳಿಕ ಮುರುಘಾಮಠ ಸ್ವಾಮೀಜಿಯ ಈ ಹೇಳಿಕೆ ಸಾಕಷ್ಟು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಕೋಲಾರ ಟಿಕೆಟ್ ಹಂಚಿಕೆ ಗೊಂದಲ: ಸಿಎಂ, ಡಿಸಿಎಂ ಭೇಟಿಯಾದ ಸಚಿವ ಕೆ.ಹೆಚ್.ಮುನಿಯಪ್ಪ - Minister KH Muniyappa