ಬೆಂಗಳೂರು: ಪ್ರಿಯಕರನ ಮೂಲಕ ಪತಿಯನ್ನ ಹತ್ಯೆ ಮಾಡಿ ಬಳಿಕ ಯಾರೋ ಕೊಲೆ ಮಾಡಿದ್ದಾರೆ ಎಂದು ನಾಟಕವಾಡಿದ್ದ ಮಹಿಳೆ ಸಹಿತ ಐವರು ಆರೋಪಿಗಳನ್ನ ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನಾಗರತ್ನ, ರಾಮ್, ಶಶಿಕುಮಾರ್, ಚಿನ್ನ ಹಾಗೂ ಸುರೇಶ್ ಎಂದು ಗುರುತಿಸಲಾಗಿದೆ.
ಅಕ್ಟೋಬರ್ 14ರಂದು ಬೆಳ್ಳಂದೂರು ಠಾಣಾ ವ್ಯಾಪ್ತಿಯ ಭೋಗನಹಳ್ಳಿ ಸಮೀಪದ ನೀಲಗಿರಿ ತೋಪಿನಲ್ಲಿ ತಿಪ್ಪೇಶ (30) ಎಂಬಾತನನ್ನ ಕೊಲೆ ಮಾಡಲಾಗಿತ್ತು. ಬಳ್ಳಾರಿ ಮೂಲದ ತಿಪ್ಪೇಶ ಹಾಗೂ ನಾಗರತ್ನ ದಂಪತಿ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನ ಭೋಗನಹಳ್ಳಿಯ ಲೇಬರ್ ಶೆಡ್'ನಲ್ಲಿ ವಾಸವಿದ್ದರು. ದಂಪತಿಗಳಿಬ್ಬರೂ ಖಾಸಗಿ ಕಂಪನಿಗಳಲ್ಲಿ ಗಾರ್ಡನರ್ ಕೆಲಸ ಮಾಡಿಕೊಂಡಿದ್ದರು.
ಅಕ್ಟೋಬರ್ 14ರಂದು ಮನೆಯಿಂದ ಹೊರಗಡೆ ಹೋಗಿದ್ದ ತಿಪ್ಪೇಶ ಭೋಗನಹಳ್ಳಿ ಸಮೀಪದ ನೀಲಗಿರಿ ತೋಪಿನಲ್ಲಿ ಶವವಾಗಿ ಪತ್ತೆಯಾಗಿದ್ದ. ಪತಿಯ ಶವದ ಮುಂದೆ ಕಣ್ಣೀರಿಟ್ಟಿದ್ದ ನಾಗರತ್ನ, ಆತನನ್ನ ಯಾರೋ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಬೆಳ್ಳಂದೂರು ಠಾಣೆಗೆ ದೂರು ನೀಡಿದ್ದಳು.
ಪ್ರಕರಣ ದಾಖಲಿಸಿಕೊಂಡಿದ್ದ ಬೆಳ್ಳಂದೂರು ಠಾಣೆ ಪೊಲೀಸರು ಅನುಮಾನಗೊಂಡು ನಾಗರತ್ನಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಅಸಲಿಯತ್ತು ಬಯಲಾಗಿದೆ. ಆರೋಪಿ ರಾಮ್ ಜೊತೆ ಸಂಬಂಧ ಹೊಂದಿದ್ದ ನಾಗರತ್ನ ಆತನ ಮೂಲಕ ತನ್ನ ಪತಿಯ ಹತ್ಯೆಗೆ ಇತರ ಆರೋಪಿಗಳಿಗೆ ಸುಪಾರಿ ನೀಡಿರುವುದು ತನಿಖೆ ವೇಳೆ ಬಯಲಾಗಿದೆ. ಪ್ರಕರಣದ ಸಂಬಂಧ ಆರೋಪಿ ನಾಗರತ್ನ, ಆಕೆಯ ಪ್ರಿಯಕರ ರಾಮ್, ಇತರ ಆರೋಪಿಗಳಾದ ಶಶಿಕುಮಾರ್, ಸುರೇಶ್ ಹಾಗೂ ಚಿನ್ನ ಎಂಬಾತನನ್ನ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದರು.
ಸ್ವಂತ ಸಹೋದರಿಯ ಪತಿ ರಾಮ್ ಜೊತೆಗೆ ಸಂಬಂಧ ಹೊಂದಿದ್ದ ನಾಗರತ್ನ, ತನ್ನ ಗಂಡ ತನಗೆ ಕಿರುಕುಳ ಕೊಡುತ್ತಿದ್ದಾನೆ. ಆತನನ್ನ ಕೊಲೆಮಾಡಿ ನನ್ನನ್ನ ಕರೆದುಕೊಂಡು ಹೋಗು ಎಂದು ರಾಮ್ ಬಳಿ ಹೇಳಿದ್ದಳು. ಅದರಂತೆ ರಾಮ್ ಹಾಗೂ ಆತನ ಸ್ನೇಹಿತರು ತಿಪ್ಪೇಶನನ್ನು ಕೊಲೆ ಮಾಡಿದ್ದರು. ನಾಗರತ್ನ ನೀಡಿದ್ದ ದೂರು ಆಧರಿಸಿ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಕೊಲೆ ಮಾಡಿದ್ದ ಆರೋಪಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದ್ದನ್ನು ಆಧರಿಸಿ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಾಗ ನಾಗರತ್ನಳ ಪಾತ್ರ ಬಯಲಾಗಿದೆ. ಸದ್ಯ ಐವರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಡಾ.ಶಿವಕುಮಾರ್ ಗುಣಾರೆ ತಿಳಿಸಿದರು.
ಓದಿ: ಬೆಳಗಾವಿಯಿಂದ ಪುಣೆಗೆ ತೆರಳುತ್ತಿದ್ದ ಬಸ್ನಲ್ಲಿ ಹಠಾತ್ ಕಾಣಿಸಿಕೊಂಡ ಬೆಂಕಿ: ಪ್ರಯಾಣಿಕ ಸಜೀವ ದಹನ!