ಬೆಳಗಾವಿ: ವಿಧಾನಸಭೆ ಕಲಾಪದಲ್ಲಿ ಬಿಜೆಪಿ ಶಾಸಕ ಮುನಿರತ್ನ ಜಾತಿ ನಿಂದನೆ ಪ್ರಕರಣ ಪ್ರತಿಧ್ವನಿಸಿತು. ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ವಾಕ್ಸಮರ ನಡೆಯಿತು.
ಜಾತಿ ನಿಂದನೆ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ವಿಷಯ ಪ್ರಸ್ತಾಪಿಸಿದರು. ಮುನಿರತ್ನರ ಮೇಲೆ ಜಾತಿ ನಿಂದನೆ ಆರೋಪ ಬಂದಿದೆ. ಅವರು ಮಾತನಾಡಿರುವುದು ಸತ್ಯ ಅಂತ ಎಫ್ಎಸ್ಎಲ್ ವರದಿ ಬಂದಿದೆ. ಮುನಿರತ್ನರದ್ದೇ ವಾಯ್ಸ್ ಎಂಬುದು ಸಾಬೀತಾಗಿದೆ. ನಾವು ಜಾತಿ ನಿಂದನೆಯನ್ನು ಸಹಿಸಲ್ಲ. ನಾನು ಅದೇ ಸಮುದಾಯದಿಂದ ಬಂದವನು. ಇದರ ಮೇಲೆ ಕ್ರಮ ಆಗಲೇಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸದನದಲ್ಲಿ ದೊಡ್ಡ ಸದ್ದು ಗದ್ದಲ ಉಂಟಾಯಿತು. ಆಡಳಿತ ಪಕ್ಷದ ಸದಸ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಎಸ್ಸಿ, ಎಸ್ಟಿ ಸಮುದಾಯ ನಿಂದಿಸಿದ್ದಾರೆ ಎಂದು ಆರೋಪಿಸಿ ಆಡಳಿತ ಪಕ್ಷ ಸದಸ್ಯರು ಮುನಿರತ್ನಗೆ ಧಿಕ್ಕಾರ ಕೂಗಿದರು. ಅವರನ್ನು ಬೆಂಬಲಿಸುತ್ತಿರುವವರಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಅತ್ತ ಬಿಜೆಪಿ ಶಾಸಕರೂ ಘೋಷಣೆ ಕೂಗಿದರು. ಕಾಂಗ್ರೆಸ್ ವಾಲಾ ಚೋರ್ ಹೈ, ಅಂಬೇಡ್ಕರ್ಗೆ ಅಪಮಾನ ಮಾಡಿದ ಕಾಂಗ್ರೆಸ್ ಎಂದು ಬಿಜೆಪಿ ಸದಸ್ಯರು ಧಿಕ್ಕಾರ ಕೂಗಿ, ಮುನಿರತ್ನ ಪ್ರಕರಣ ಕೋರ್ಟ್ನಲ್ಲಿದ್ದು, ಆ ವಿಚಾರವನ್ನು ಇಲ್ಲಿ ಚರ್ಚಿಸುವುದು ಬೇಡ ಎಂದರು.
ಶಾಸಕ ಮುನಿರತ್ನ ಜಾತಿ ನಿಂದನೆ ಮಾಡಿದ್ದಾರೆ. ಇಂಥ ವ್ಯಕ್ತಿ ಶಾಸಕನಾಗಿರಲು ಹೇಗೆ ಸಾಧ್ಯ. ನಾವು ಜಾತಿ ನಿಂದನೆ ಸಹಿಸಲು ಆಗಲ್ಲ. ಆ ಸಮುದಾಯದ ಶಾಸಕರಾಗಿ ಸಹಿಸಲ್ಲ. ಮುನಿರತ್ನ ಅಸಾಂವಿಧಾನಿಕ, ಕೆಟ್ಟ ಪದ ಬಳಸಿದ್ದಾರೆ, ಸಮುದಾಯಕ್ಕೆ ದೂಷಣೆ ಮಾಡಿ ತುಚ್ಛವಾಗಿ ಮಾತಾಡಿರೋದು ಆಡಿಯೋದಲ್ಲಿದೆ. ಈ ಸದನದಿಂದ ಮುನಿರತ್ನರನ್ನು ಅಮಾನತು ಮಾಡಬೇಕು ಎಂದು ನರೇಂದ್ರಸ್ವಾಮಿ ಆಗ್ರಹಿಸಿದರು. ಗದ್ದಲ ಹೆಚ್ಚಾದಾಗ ಹತ್ತು ನಿಮಿಷಗಳ ಕಾಲ ಕಲಾಪವನ್ನು ಸ್ಪೀಕರ್ ಮುಂದೂಡಿದರು.
ನಾರಾಯಣಸ್ವಾಮಿ, ಸಮೃದ್ಧಿ ಮಂಜುನಾಥ್ ಜಟಾಪಟಿ: ಕಲಾಪ ಮುಂದೂಡಿದ ಕೂಡಲೇ ಕಾಂಗ್ರೆಸ್ನ ನಾರಾಯಣಸ್ವಾಮಿ ಹಾಗೂ ಜೆಡಿಎಸ್ನ ರೇವಣ್ಣ, ಸಮೃದ್ಧಿ ಮಂಜುನಾಥ್ ನಡುವೆ ಜಟಾಪಟಿ ಏರ್ಪಟ್ಟಿತು. ರೇವಣ್ಣ ಮತ್ತು ನರೇಂದ್ರಸ್ವಾಮಿ ನಡುವೆ ಮಾತಿನ ಚಕಮಕಿ ಉಂಟಾಯಿತು. ಇಡೀ ನಿಮ್ಮ ಮನೆಯೇ ದಲಿತ ವಿರೋಧಿ, ಕೂತ್ಕೊಳಯ್ಯಾ ಸುಮ್ಮನೆ ಎಂದು ಕಾಂಗ್ರೆಸ್ ಶಾಸಕ ನಾರಾಯಣಸ್ವಾಮಿ ರೇವಣ್ಣಗೆ ಏಕವಚನ ಪ್ರಯೋಗಿಸಿದರು.
ಈ ವೇಳೆ ನೀನೂ ದಲಿತ, ಅವರನ್ನು ಬೆಂಬಲಿಸುತ್ತಿಯಾ ಸದನದ ಬಾವಿಯಿಂದ ಹೊರಗೆ ಬಾ ಎಂದು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ಗೆ ನಾರಾಯಣಸ್ವಾಮಿ ಏರು ದನಿಯಲ್ಲಿ ಹೇಳಿದರು. ಈ ವೇಳೆ ಪರಸ್ಪರ ಕೈ ಕೈ ತೋರಿಸಿಕೊಂಡು ಇಬ್ಬರಿಂದಲೂ ವಾಗ್ವಾದ ಉಂಟಾಯಿತು. ಕೊನೆಗೆ ಮಧ್ಯಪ್ರವೇಶ ಮಾಡಿದ ಡಿ.ಕೆ.ಶಿವಕುಮಾರ್ ಪರಿಸ್ಥಿತಿ ತಿಳಿಗೊಳಿಸಿದರು.
ಇದಕ್ಕೂ ಮುನ್ನ ಹೆಚ್.ಡಿ.ರೇವಣ್ಣ ಮಧ್ಯಪ್ರವೇಶಿಸಿ, ಮುನಿರತ್ನ ಪ್ರಕರಣ ಕೋರ್ಟಲ್ಲಿದ್ರೂ ಚರ್ಚೆಗೆ ಅವಕಾಶ ಕೊಟ್ರಿ. ನಮಗೂ ಚರ್ಚೆಗೆ ಅವಕಾಶ ಕೊಡುವಂತೆ ಆಗ್ರಹಿಸಿದರು. ಚರ್ಚೆಗೆ ಅವಕಾಶ ಕೊಡದ ಹಿನ್ನೆಲೆ ಹೆಚ್.ಡಿ.ರೇವಣ್ಣ ಜತೆ ಜೆಡಿಎಸ್ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ ನಡೆಸಿದರು.
ಇದನ್ನೂ ಓದಿ: ಕಿತ್ತೂರು ಕರ್ನಾಟಕಕ್ಕೂ 371ಜೆ ವಿಶೇಷ ಸ್ಥಾನಮಾನ ಕಲ್ಪಿಸಿ: ಸದನದಲ್ಲಿ ಶಾಸಕ ಕೋನರೆಡ್ಡಿ ಒತ್ತಾಯ