ಬೆಂಗಳೂರು: ಕೃಷಿ ವಿಜ್ಞಾನ ಮತ್ತು ಸಂಶೋಧನಾ ವಿಶ್ವವಿದ್ಯಾಲಯ (ಜಿ.ಕೆ.ವಿ.ಕೆ) ವಿನೂತನ ಬಹು ಬೆಳೆ ಸಂಸ್ಕರಣಾ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದು, ಮುಂದಿನ ಕೃಷಿ ಮೇಳದಲ್ಲಿ ಅದನ್ನು ಅನಾವರಣಗೊಳಿಸಲು ಸಕಲ ತಯಾರಿ ನಡೆಸಿದೆ.
ಈ ಯಂತ್ರ ದೇಶೀಯ ಮತ್ತು ರಫ್ತು ಸಂಸ್ಕಾರಣಾ ಉದ್ಯಮಕ್ಕೆ ನೆಲಗಡಲೆ, ಸೂರ್ಯಕಾಂತಿ ಮತ್ತು ಮೆಕ್ಕೆಜೋಳದ ಕಚ್ಚಾ ವಸ್ತುಗಳ ಲಭ್ಯತೆಯನ್ನು ಹೆಚ್ಚಿಸಲಿದೆ. ಮಧ್ಯಮ ರೈತರು/ ಸಂಸ್ಕಾರಕರು, ಬೀಜ ಸಂಸ್ಕರಣಾ ಉದ್ಯಮಿಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಗುಡಿ ಕೈಗಾರಿಕೆಗಳ ಆದಾಯವನ್ನು ದ್ವಿಗುಣಗೊಳಿಸಲು ಯಂತ್ರವು ತುಂಬಾ ಉಪಯುಕ್ತವಾಗಿದೆ.
ಭಾರತವು ವಿಶ್ವದ ಅತಿದೊಡ್ಡ ಖಾದ್ಯ ತೈಲ ಆಮದು ಮಾಡಿಕೊಳ್ಳುವ ದೇಶವಾಗಿದೆ. ಒಟ್ಟು ಖಾದ್ಯ ತೈಲ ಬಳಕೆಯಲ್ಲಿ ಸುಮಾರು ಶೇ. 60ರಷ್ಟು ಆಮದು ಮಾಡಿಕೊಳ್ಳಲಾಗುತ್ತದೆ. ಇದರ ವೆಚ್ಚ ಸುಮಾರು 1.57 ಲಕ್ಷ ಕೋಟಿಯಷ್ಟಿಯಿದೆ. ಭಾರತವು ವಾರ್ಷಿಕವಾಗಿ 7 ಶತಕೋಟಿ ಕೆ.ಜಿ. ಖಾದ್ಯ ತೈಲಗಳನ್ನು ಬಳಸುತ್ತದೆ. ರಷ್ಯಾ - ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಸಂಘರ್ಷದಿಂದಾಗಿ ಭಾರತಕ್ಕೆ ಸೂರ್ಯಕಾಂತಿ ಎಣ್ಣೆಯ ಆಮದು ಮಾಡಿಕೊಳ್ಳಲು ದೊಡ್ಡ ಪ್ರಮಾಣದಲ್ಲಿ ಹೊಡೆತ ಬಿದ್ದಿದೆ ಇದಕ್ಕೆ ಈ ಯಂತ್ರ ಸಮಸ್ಯೆಗಳಿಗೆ ಇತಿಶ್ರೀ ಹಾಡಲಿದೆ.
ಕರ್ನಾಟಕವು ಅತಿದೊಡ್ಡ ಸೂರ್ಯಕಾಂತಿ ಉತ್ಪಾದಕ ಪ್ರದೇಶವಾಗಿದ್ದು, ದೇಶದ ಒಟ್ಟು ಸೂರ್ಯಕಾಂತಿ ಉತ್ಪಾದನೆಯಲ್ಲಿ ಶೇ 48ರಷ್ಟು ಕೊಡುಗೆ ನೀಡುತ್ತಿದೆ. ಜಾಗತಿಕ ಉತ್ಪಾದನೆಯ ಸುಮಾರು ಶೇ. 32ರಷ್ಟನ್ನು ಹೊಂದಿರುವ ಭಾರತವು ನೆಲಗಡಲೆ ವಿಶ್ವದ ಎರಡನೇ ಅತಿದೊಡ್ಡ ಉತ್ಪಾದಕ ದೇಶವಾಗಿದೆ. ಭಾರತದ ರಾಜ್ಯಗಳಲ್ಲಿ ಗುಜರಾತ ಅಗ್ರಸ್ಥಾನದಲ್ಲಿದ್ದರೇ ಕರ್ನಾಟಕವು 5ನೇ ಸ್ಥಾನದಲ್ಲಿ ನೆಲಗಡಲೆ ಉತ್ಪಾದಿಸುವ ರಾಜ್ಯವಾಗಿದೆ.
ಮೆಕ್ಕೆಜೋಳವನ್ನು ರೈತರ ಆದಾಯವನ್ನು ದ್ವಿಗುಣಗೊಳಿಸುವ ಸಂಭಾವ್ಯ ಬೆಳೆ ಎಂದು ಪರಿಗಣಿಸಲಾಗಿದೆ. ಭಾರತದಲ್ಲಿ, ಏಕದಳ ಬೆಳೆಯಲ್ಲಿ ಮೆಕ್ಕೆಜೋಳವು ಒಟ್ಟು ಆಹಾರ ಧಾನ್ಯ ಉತ್ಪಾದನೆಯ ಸುಮಾರು ಶೇ 10 ರಷ್ಟನ್ನು ಹೊಂದಿದ್ದು, ಕರ್ನಾಟಕವು ಭಾರತದ ರಾಜ್ಯಗಳಲ್ಲಿ ಮುಂಚೂಣಿಯಲ್ಲಿದೆ. ಹಾಗಾಗಿ ಸೂರ್ಯಕಾಂತಿ, ನೆಲಗಡಲೆ ಮತ್ತು ಮೆಕ್ಕೆಜೋಳಿಗೆ ಭಾರಿ ಬೇಡಿಕೆ ಇದೆ.
ನೆಲಗಡಲೆ, ಸೂರ್ಯಕಾಂತಿ ಮತ್ತು ಮೆಕ್ಕೆಜೋಳದ ಹಸ್ತಚಾಲಿತ ಸಂಸ್ಕರಣೆಯು ಕಠಿಣವಾಗಿದೆ. ಯಾಂತ್ರಿಕೃತ ಮತ್ತು ದೊಡ್ಡ ಪ್ರಮಾಣದ ಸಂಸ್ಕರಣೆ ಪ್ರಾಥಮಿಕವಾಗಿ ಉದ್ಯಮ ಮತ್ತು ನಗರ ಪ್ರದೇಶಗಳಲ್ಲಿ ಕೇಂದ್ರಿಕೃತವಾಗಿದೆ. ಸದ್ಯ ಸೂರ್ಯ ಕಾಂತಿ ಮತ್ತು ಮೆಕ್ಕೆಜೋಳದ ಸಂಸ್ಕರಣೆಯು ಹೆಚ್ಚುತ್ತಿರುವುದರಿಂದ ಕಡಿಮೆ ವೆಚ್ಚ, ಸಣ್ಣ ಪ್ರಮಾಣದ ಮತ್ತು ಹೆಚ್ಚು ಪರಿಣಾಮಕಾರಿಯಾದ ಬಹು - ಬೆಳೆ ಸಂಸ್ಕರಣಾ ಯಂತ್ರದ ಅಗತ್ಯವಿದೆ.
ನೆಲಗಡಲೆ ಬೀಜಗಳನ್ನು ಬೇರ್ಪಡಿಸುವಾಗ ಶೇಕಡಾ 2ಕ್ಕಿಂತ ಕಡಿಮೆ ಒಡೆದಿರುವ ಬೀಜಗಳ ಪ್ರಮಾಣ ಕಂಡುಬಂದಿರುತ್ತದೆ. ಬಹು - ಬೆಳೆಗಳಿಗೆ ಈ ಯಂತ್ರದ ದಕ್ಷತೆಯು ಶೇ 98ರಷ್ಟು ಕಂಡು ಬಂದಿದೆ. ಯಂತ್ರದಿಂದ ಬೇರ್ಪಡಿಸಿದ ನೆಲಗಡಲೆ ಬೀಜ, ಸೂರ್ಯಕಾಂತಿ ಬೀಜ ಮತ್ತು ಮೆಕ್ಕೆಜೋಳ ಬೀಜ ಪರೀಕ್ಷಿಸಿದಾಗ ಎಲ್ಲಾ ಬೀಜಗಳ ಮೊಳಕೆಯೊಡೆಯುವಿಕೆ ಶೇ 95 ಕ್ಕಿಂತ ಹೆಚ್ಚಿನದ್ದಾಗಿದೆ.
ಪ್ರಮಾಣದಲ್ಲಿ ಕಂಡು ಬಂದಿರುತ್ತದೆ ಯಂತ್ರವು ಕೈಗೆಟಕುವ, ಪೋರ್ಟಬಲ್ ಮತ್ತು ಸುಲಭವಾಗಿ ಕಾರ್ಯನಿರ್ವಹಿಸುತ್ತದೆ. ಈ ಯಂತ್ರದ ವೆಚ್ಚ 40 ಸಾವಿರವಾಗಿದೆ. ನೆಲಗಡಲೆ, ಸೂರ್ಯಕಾಂತಿ ಮತ್ತು ಮೆಕ್ಕೆಜೋಳವನ್ನು ಸಂಸ್ಕರಿಸಲು ಅಗತ್ಯವಿರುವ ನಾಲ್ಕು ಪ್ರತ್ಯೇಕ ಯಂತ್ರಗಳ ಒಟ್ಟು ವೆಚ್ಚಕ್ಕೆ ಹೋಲಿಸಿದರೆ ಈ ಯಂತ್ರದ ವೆಚ್ಚವು 3 ರಿಂದ 4 ಪಟ್ಟು ಕಡಿಮೆಯಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ಅಭಿಯಂತರರು ಹಾಗೂ ಯೋಜನಾ ಮುಖ್ಯಸ್ಥ ಡಾ. ಪ್ರೊ. ಎಂ. ಮಂಜುನಾಥ್ ಹೇಳಿದ್ದಾರೆ.
ಇದನ್ನೂ ಓದಿ: ಜುಲೈನಲ್ಲಿ ಭರವಸೆ ಮೂಡಿಸಿದ ಮುಂಗಾರು: ದೇಶದಲ್ಲಿ ಕಳೆದ ಬಾರಿಗಿಂತ ಹೆಚ್ಚು ಬಿತ್ತನೆ - July Monsoon