ಮೈಸೂರು: ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಳೆ ತನಿಖೆಗೆ ಹಾಜರಾಗುವಂತೆ ಎಫ್ಐಆರ್ನಲ್ಲಿ ದಾಖಲಾಗಿರುವ 3ನೇ ಹಾಗೂ 4ನೇ ಆರೋಪಿಗಳಿಗೆ ಮೈಸೂರು ಲೋಕಾಯುಕ್ತರು ಇಂದು ನೋಟಿಸ್ ಜಾರಿ ಮಾಡಿದ್ದಾರೆ.
A3 ಆರೋಪಿಯಾಗಿರುವ ಮಲ್ಲಿಕಾರ್ಜುನ್ ಸ್ವಾಮಿ ಹಾಗೂ A4 ದೇವರಾಜು ಎಂಬವರು ವಿಚಾರಣೆಗೆ ಬರುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಮಾಹಿತಿ ಪಡೆಯಲು 'ಈಟಿವಿ ಭಾರತ' ಪ್ರತಿನಿಧಿ ಲೋಕಾಯುಕ್ತ ಎಸ್ಪಿ ಉದೇಶ್ ಅವರಿಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ.
ಮುಡಾಗೆ ಇಡಿ ನೋಟಿಸ್: ಕಳೆದ 9 ವರ್ಷಗಳಲ್ಲಿ ಮುಡಾದಲ್ಲಿ 50:50 ಬದಲಿ ನಿವೇಶನ ಹಾಗೂ ಇತರ ಅಕ್ರಮಗಳ ಕುರಿತು ದೂರುದಾರ ಸ್ನೇಹಮಯಿ ಕೃಷ್ಣ 500 ಪುಟದ ದಾಖಲೆಗಳನ್ನು ಇಡಿಗೆ ತಲುಪಿಸಿದ್ದು, ದೂರು ಸಹ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಇಡಿ ತನಿಖೆಗೂ ಹಾಜರಾಗಿದ್ದರು. ಇದರ ನಡುವೆ ಇಡಿ ಅಧಿಕಾರಿಗಳು ಮೂರು ದಿನಗಳಲ್ಲಿ ಅಗತ್ಯ ಹಣಕಾಸು ವಹಿವಾಟು ನಡೆದಿರುವ ಮಾಹಿತಿ ನೀಡುವಂತೆ ಮುಡಾಗೆ ಮಂಗಳವಾರ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಮುಡಾಗೆ ದಾಖಲೆ ಒದಗಿಸುವ ಸವಾಲು: ಒಂದೆಡೆ ಲೋಕಾಯುಕ್ತ, ಮತ್ತೊಂದೆಡೆ ಇಡಿ ತನಿಖೆ ನಡೆಸುತ್ತಿದ್ದು, ಈ ತನಿಖೆಗೆ ದಾಖಲಾತಿಗಳನ್ನು ಕೊಡುವುದೇ ಮುಡಾ ನೌಕರರಿಗೆ ದೊಡ್ಡ ಸವಾಲಾಗಿದೆ. ತನಿಖೆಗೆ ದಾಖಲಾತಿಗಳನ್ನು ನೀಡಲು ಹೊಸ ಜೆರಾಕ್ಸ್ ಯಂತ್ರಗಳನ್ನು ಖರೀದಿಸಿದ್ದು, ಹಗಲು ರಾತ್ರಿ ಎನ್ನದೆ ದಾಖಲಾತಿಗಳನ್ನು ಜೆರಾಕ್ಸ್ ಮಾಡಿಸಲಾಗುತ್ತಿದೆ.
ಇದನ್ನೂ ಓದಿ: ಕುಮಾರಸ್ವಾಮಿಯವರ ಯಾವುದೇ ಹೇಳಿಕೆಗಳು ನ್ಯಾಯಯುತವಾಗಿರಲ್ಲ: ಡಿ.ಕೆ.ಸುರೇಶ್