ಕಾರವಾರ: "ಗುಡ್ಡಕುಸಿತದಿಂದ ಹಾನಿಗೊಳಗಾಗಿರುವ ಉಳುವರೆಯಲ್ಲಿರುವ ಮನೆಗಳು ಅಪಾಯದಲ್ಲಿದ್ದರೆ ಅಲ್ಲಿನ ನಿವಾಸಿಗಳನ್ನು ಕೂಡಲೇ ಸ್ಥಳಾಂತರಿಸಬೇಕು. ಇದಕ್ಕೆ ಜನರೂ ಕೂಡ ಸಹಕಾರ ನೀಡಬೇಕು" ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ಧಾರೆ.
ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದ ಅವರು, "ನಮ್ಮ ಸೇನೆ ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಲಾರಿ ಇರುವ ಜಾಗವನ್ನು ಪತ್ತೆ ಮಾಡಿದೆ. ಅದರ ಮೇಲೆ ಮಣ್ಣಿದೆ. ಅದನ್ನು ತೆರವು ಮಾಡಲು ತಜ್ಞರ ಅಗತ್ಯತೆ ಇದ್ದು ಅವರೂ ಕೂಡ ಆಗಮಿಸಿದ್ದಾರೆ. ಕೆಲ ಉಪಕರಣಗಳು ಬೇಕಾಗಿದ್ದು ಬರುತ್ತಿವೆ. ಇದು ಗಂಭೀರವಾದ ಸಮಸ್ಯೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಜಿಲ್ಲಾಡಳಿತ ಹಗಲಿರುಳು ಶ್ರಮಿಸುತ್ತಿದೆ. ಮಳೆ ಕೂಡಾ ಜೋರಾಗಿದ್ದು, ಕೆಲಸಗಳಿಗೆ ಅಡ್ಡಿಯಾಗುತ್ತಿದೆ" ಎಂದರು.
"ಇಂತಹ ದುರ್ಘಟನೆಯ ಸಂದರ್ಭದಲ್ಲಿ ಜಿಲ್ಲಾಡಳಿತ ಏನು ಸಾಧ್ಯವೋ ಎಲ್ಲವನ್ನೂ ಎಲ್ಲರ ಸಲಹೆ ಸೂಚನೆಯೊಂದಿಗೆ ಮಾಡುತ್ತಿದೆ. ಮಳೆಯೊಂದಿಗೆ ಐಆರ್‌ಬಿ ಅವೈಜ್ಞಾನಿಕ ಕಾಮಗಾರಿ ಕೂಡ ಈ ಘಟನೆಗೆ ಕಾರಣ. ಮುಂದಿನ ದಿನಗಳಲ್ಲಿ ಐಆರ್‌ಬಿಯವರು ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕು" ಎಂದು ಹೇಳಿದರು.
"ಸದ್ಯ ಕಾಳಜಿ ಕೇಂದ್ರದ ವ್ಯವಸ್ಥೆ ಮಾಡಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಏನು ಕಾನೂನು ಕ್ರಮ ಆಗಬೇಕೋ ಆಗುತ್ತದೆ. ಕೇಂದ್ರ ಸಚಿವ ಕುಮಾರಸ್ವಾಮಿ ಬಂದು ಹೋಗಿದ್ದಾರೆ. ನಾವೂ ಕೂಡ ನಿರಂತರವಾಗಿ ಸಂಪರ್ಕದಲ್ಲಿದ್ದು ಕೆಲಸ ಮಾಡಿಸಿದ್ದೇವೆ."
"ಮೂರು ಜನರಿಗೆ ಹುಡುಕಾಟ ನಡೆಸಲಾಗುತ್ತಿದೆ. ಹೆದ್ದಾರಿಗೆ ಪರ್ಯಾಯ ರಸ್ತೆಯ ಸುಧಾರಣೆ ರಿಪೇರಿಗೂ ಈಗಾಗಲೇ ಸೂಚನೆ ನೀಡಲಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರ ಹೆಚ್ಚಿನ ಪರಿಹಾರದ ಹಣ ನೀಡಿತ್ತು. ಅದರಂತೆ ರಾಜ್ಯ ಸರ್ಕಾರವೂ ಹೆಚ್ಚು ಪರಿಹಾರ ನೀಡಬೇಕು. ಕಷ್ಟದಲ್ಲಿರುವವರಿಗೆ ಸರ್ಕಾರ ಸ್ಪಂದಿಸುವ ಕೆಲಸ ಮಾಡಬೇಕು. ಮನೆಗಳಿಗೆ ನೀರು ನುಗ್ಗಿದ್ದರೆ ಬಿಜೆಪಿ ಸರ್ಕಾರ 10 ಸಾವಿರ ರೂ ನೀಡಿತ್ತು. ಆದರೆ ಇದೀಗ 5 ಸಾವಿರ ರೂ ನೀಡುತ್ತಿದ್ದಾರೆ. ಈಗ ಹಾನಿಯಾದವರಿಗೆ ಹೆಚ್ಚಿನ ಪರಿಹಾರ ನೀಡುವ ಆದೇಶ ಆಗಬೇಕು" ಎಂದು ಸಂಸದ ಕಾಗೇರಿ ಆಗ್ರಹಿಸಿದರು.