ದಾವಣಗೆರೆ: "ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಮೋದಿ ಕಾರ್ಯಕ್ರಮಕ್ಕೆ ಯಡಿಯೂರಪ್ಪನವರು ಸೌಜನ್ಯಕ್ಕಾದರೂ ನನಗೆ ಆಹ್ವಾನ ನೀಡಲಿಲ್ಲ. ಇದು ದುರಂತ. ನಮ್ಮ ಅವಶ್ಯಕತೆ ಇಲ್ಲವೆಂದರೆ ಕೈ ಬಿಡಲಿ" ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ದಾವಣಗೆರೆಯಲ್ಲಿ ಬುಧವಾರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, "ಯಾರು ತಪ್ಪು ಮಾಡಿದ್ದಾರೋ ಅವರನ್ನು ಪಕ್ಷದಿಂದ ಹೊರಹಾಕಲಿ. ನಾವು ರೆಡಿಮೇಡ್ ಫುಡ್ ಅಲ್ಲ, ಸ್ವಂತ ಸಾಮರ್ಥ್ಯದಿಂದ ಬೆಳೆದು ಬಂದಿದ್ದೇವೆ. ಜನಸಾಮಾನ್ಯರ ಭಾವನೆಗಳನ್ನು ಬಹಿರಂಗವಾಗಿ ಹೇಳಿದ್ದೇವೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದರೆ ಪಕ್ಷದಿಂದ ಹೊರಹಾಕಲಿ" ಎಂದರು.
"ನಮ್ಮ ವಿರುದ್ಧ ಪಿತೂರಿ ನಡೆದಿದೆ. ಮೋದಿ, ಅಮಿತ್ ಶಾ, ಯಡಿಯೂರಪ್ಪ ವಿರುದ್ಧ ನಾವು ಮಾತನಾಡಿಲ್ಲ. ನನಗೆ ಬಿ.ಎಸ್.ಯಡಿಯೂರಪ್ಪನವರು ಯಾವುದೇ ಎಚ್ಚರಿಕೆ ನೀಡಿಲ್ಲ. ಆದರೆ ಕೆಲ ಮಾಧ್ಯಮಗಳಲ್ಲಿ ಮಾತ್ರ ವರದಿಯಾಗಿದೆ. ಅದು ಇಲ್ಲಿಯವರ ಪಿತೂರಿ ಅಷ್ಟೇ. ನಾವು ಲೋಕಸಭಾ ಟಿಕೆಟ್ ಬದಲಾವಣೆ ಮಾಡಿ ಎಂದು ಮೊದಲಿನಿಂದಲೂ ಹೇಳಿದ್ದೇವೆ" ಎಂದು ತಿಳಿಸಿದರು.
ಮುಂದುವರೆದು ಮಾತನಾಡಿ, "ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು. ದೇಶದಲ್ಲಿ 400ಕ್ಕೂ ಹೆಚ್ಚು ಸೀಟ್ ಗೆಲ್ಲಲಿ ಎಂದು ನಾವು ಬಯಸುತ್ತೇವೆ. ಈಶ್ವರಪ್ಪನವರ ಪುತ್ರನಿಗೆ ಟಿಕೆಟ್ ಕೊಡಬೇಕಿತ್ತು. ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಕುಟುಂಬದ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ತಾಕತ್ತಿದ್ದರೆ ಅಂಥವರು ಬಹಿರಂಗವಾಗಿ ಬರಲಿ, ದೇವಸ್ಥಾನದ ಘಂಟೆ ಹೊಡೆದು ಹೇಳಲಿ. ಸುಖಾಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ" ಎಂದು ಗರಂ ಆದರು.
ಇದನ್ನೂ ಓದಿ: 'ಯಾರೋ ನೋಡಿಕೊಂಡು ಬಂದ ಹೆಣ್ಣನ್ನು ನಾನು ಮದುವೆಯಾಗುವುದಿಲ್ಲ'