ಕಾರವಾರ: ಶಾಸಕ ಶಿವರಾಮ್ ಹೆಬ್ಬಾರ್ ರಾಜ್ಯಸಭಾ ಚುನಾವಣೆಯಲ್ಲಿ ಮತಹಾಕಿಲ್ಲ, ಈ ಚುನಾವಣೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಿಲ್ಲ, ಅವರಿಗೆ ಪಕ್ಷದ ತತ್ವ ಸಿದ್ಧಾಂತಗಳು ಒಪ್ಪಿಗೆಯಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಅವರು ಪಕ್ಷಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಲಿ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸವಾಲು ಹಾಕಿದರು.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಬ್ಬಾರ್ ಅವರಿಗೆ ಪಕ್ಷದ ಚೌಕಟ್ಟಿನಲ್ಲಿ ಇರಲು ಆಗಲ್ಲ ಎಂದಾದರೆ, ಪ್ರಜಾಪ್ರಭುತ್ವದಲ್ಲಿ ರಾಜೀನಾಮೆ ನೀಡುವುದೊಂದೇ ಪರಿಹಾರ. ಈ ನಿಟ್ಟಿನಲ್ಲಿ ರಾಜೀನಾಮೆ ನೀಡಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ, ಜನರ ಮುಂದೆ ಹೋಗಿ ಜನಾಭಿಪ್ರಾಯ ಪಡೆದುಕೊಳ್ಳಲಿ ಎಂದು ಹೇಳಿದರು.
ಮಾಜಿ ಸಿಎಂ ಯಡಿಯೂರಪ್ಪ ಮೇಲಿನ ಆರೋಪ ರಾಜಕೀಯ ಷಡ್ಯಂತ್ರದ ಭಾಗವಾಗಿದೆ. ನ್ಯಾಯಾಲಯದಲ್ಲಿ ತನಿಖಾ ಹಂತದಲ್ಲಿದ್ದು, ಯಡಿಯೂರಪ್ಪ ಅವರು ಆರೋಪದಿಂದ ಮುಕ್ತವಾಗಿ ಹೊರಬರುವ ವಿಶ್ವಾಸವಿದೆ ಎಂದು ಕಾಗೇರಿ ಹೇಳಿದರು.
ಕಾಂಗ್ರೆಸ್ ಅಭಿವೃದ್ಧಿ ಬಗ್ಗೆ ಕೇಂದ್ರೀಕರಿಸಲಿ: ಚುನಾವಣೆಯ ಫಲಿತಾಂಶವನ್ನು ಗಮನಿಸಿದರೇ ಸರ್ಕಾರ ಭ್ರಮನಿರಸಗೊಂಡಿರುವುದು ಗೊತ್ತಾಗುತ್ತದೆ. ಒಂದು ವರ್ಷದ ಅವಧಿಯಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಆಡಳಿತದಲ್ಲಿ ಭ್ರಷ್ಟತೆ, ಭೇದ- ಭಾವ, ಅಲ್ಪಸಂಖ್ಯಾತರ ತುಷ್ಟೀಕರಣ, ಬಹುಸಂಖ್ಯಾತರ ಕಡೆಗಣನೆಯೇ ಈ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಭಿವೃದ್ಧಿ ಕೇಂದ್ರೀಕರಿಸಿ ಆಡಳಿತ ಮಾಡಬೇಕು ಎಂದು ತಿಳಿಸಿದರು.
ಅಲ್ಪಸಂಖ್ಯಾತರು ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ಇರಬೇಕು ಎಂದು ನಾನು ಹಲವಾರು ಸಭೆಗಳಲ್ಲಿ ಹೇಳಿದ್ದೆ. ಆದರೆ, ಕಾಂಗ್ರೆಸ್ ಷಡ್ಯಂತ್ರದಿಂದಾಗಿ ಅಲ್ಪಸಂಖ್ಯಾತರು ಈ ಬಾರಿ ರಾಷ್ಟ್ರೀಯ ಮುಖ್ಯವಾಹಿನಿಗೆ ಬಂದಿಲ್ಲ. ಇದು ನಮ್ಮ ದೇಶದ ಏಕಾತ್ಮತೆಗೆ ಧಕ್ಕೆಯಾಗಿದೆ. ಮತದಾನದಲ್ಲಿಯೂ ಅವರು ರಾಷ್ಟ್ರೀಯ ಮುಖ್ಯವಾಹಿನಿಗೆ ಬರಬೇಕು. ಕಾಂಗ್ರೆಸ್ ದುರುಪಯೋಗ ಮಾಡಿಕೊಳ್ಳುವುದರಿಂದ ಹೊರಬರಬೇಕು ಕಿವಿಮಾತು ಹೇಳಿದರು
ಜೆಡಿಎಸ್ ಬೆಂಬಲದಿಂದ ಐತಿಹಾಸಿಕ ಗೆಲುವು: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಿತ್ತೂರು, ಖಾನಾಪುರವನ್ನು ಒಳಗೊಂಡಂತೆ ಎಲ್ಲ ಕ್ಷೇತ್ರದಲ್ಲಿಯೂ ಜನ ನಿರೀಕ್ಷೆಗೂ ಮೀರಿ ಬೆಂಬಲವನ್ನು ನೀಡಿದ್ದಾರೆ. ಈ ಕಾರಣದಿಂದಲೇ ಬಿಜೆಪಿ ಇದೇ ಮೊದಲ ಬಾರಿ ಕಾಂಗ್ರೆಸ್ ವಿರುದ್ಧ ಇಷ್ಟೊಂದು ದೊಡ್ಡಮಟ್ಟದ ಗೆಲುವು ದಾಖಲಿಸಿದೆ. ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಜನ ಚುನಾವಣೆಯನ್ನು ಹಬ್ಬದ ರೀತಿ ಸಂಭ್ರಮಿಸಿದರು. ನಮ್ಮ ಸಂಘಟನೆಗಳು ಕೂಡ ಉತ್ತಮವಾಗಿ ಕೆಲಸ ಮಾಡಿದ ಕಾರಣ ಮತ್ತು ಜೆಡಿಎಸ್ ಬೆಂಬಲದಿಂದಾಗಿ ಈ ಬಾರಿ ಐತಿಹಾಸಿಕ ಗೆಲುವು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಸರ್ಕಾರದ ಅನೇಕ ಯೋಜನೆಗಳ ಫಲ ಇನ್ನಷ್ಟು ಜನರಿಗೆ ಸಿಗಬೇಕಾಗಿದೆ. ದೊಡ್ಡ ದೊಡ್ಡ ಐತಿಹಾಸಿಕ ಕ್ಷೇತ್ರಗಳ ಅಭಿವೃದ್ಧಿ ದೃಷ್ಟಿಯಿಂದ ಬೇಕಾದ ಪ್ರಯತ್ನ ಮಾಡುತ್ತೇನೆ. ಹೊಸ ಯೋಜನೆಗಳು ಜಿಲ್ಲೆಗೆ ಬೇಕಾಗಿದೆ. ಈ ಬಗ್ಗೆ ಎಲ್ಲರೊಂದಿಗೂ ಸಮಾಲೋಚನೆ ನಡೆಸುತ್ತೇನೆ ಎಂದರು.
ಇದನ್ನೂ ಓದಿ: ದೇವೇಗೌಡರ ಕುಟುಂಬ ಆಯ್ತು, ಈಗ 82 ವರ್ಷದ ಯಡಿಯೂರಪ್ಪ ಮೇಲೆ ಕಾಂಗ್ರೆಸ್ ಸೇಡು: ಹೆಚ್‌ಡಿಕೆ - H D Kumaraswamy