ಹುಬ್ಬಳ್ಳಿ: ಮುಡಾ ಸೈಟ್ ವಾಪಸ್ ಕೊಡುವ ಮೂಲಕ ಸಿಎಂ ಸಿದ್ದರಾಮಯ್ಯ ಮತ್ತಷ್ಟು ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡಿದ್ದಾರೆ ಎಂದು ಬಿಜೆಪಿ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರು ಮುಡಾ ಸೈಟ್ ವಾಪಸ್ ಕೊಟ್ಟಿರುವ ಕುರಿತು ನಗರದಲ್ಲಿಂದು ಮಾತನಾಡಿದ ಅವರು, ಈ ಕೆಲಸವನ್ನು ಅವರು ಮೊದಲೇ ಮಾಡಬೇಕಿತ್ತು. ಆಗಲೇ ಹೈಕೋರ್ಟ್ ನ್ಯಾಯಮೂರ್ತಿಗಳ ಮೂಲಕ ತನಿಖೆ ಮಾಡಿಸಿದ್ದರೆ ಮುಗಿದು ಹೋಗುತ್ತಿತ್ತು. ಸಿದ್ದರಾಮಯ್ಯರ ಪ್ರಾಮಾಣಿಕತೆ ಬಗ್ಗೆ ಪ್ರಶ್ನೆ ಬರುತ್ತಿರಲಿಲ್ಲ. ಆದರೆ, ಆಗ ಸಮರ್ಥಿಸಿಕೊಂಡರು. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟು ಪ್ರಕರಣ ದಾಖಲಾಗಿ, ತನಿಖೆ ನಡೆದಿದೆ. ಈಗ ವಾಪಸ್ ಮಾಡಿರುವುದರಿಂದ ಹಲವಾರು ಪ್ರಶ್ನೆಗಳು ಉದ್ಭವಿಸಿವೆ. ಸೈಟ್ ವಾಪಸ್ ಮಾಡುವ ಮೂಲಕ ಪ್ರಕರಣವನ್ನು ಮತ್ತಷ್ಟು ಜಟಿಲ ಮಾಡಿಕೊಂಡಿದ್ದಾರೆ ಎಂದರು.
ಎಫ್ಐಆರ್ ಆದ ಬಳಿಕ ತನಿಖೆ ಆಗಲೇಬೇಕು. ಒಂದು ಕಡೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಮತ್ತೊಂದೆಡೆ ಇ.ಡಿ. ತನಿಖೆ ಮಾಡುತ್ತಿದೆ. ಮೊದಲು ಕಾಂಗ್ರೆಸ್ ನಾಯಕರು ತಪ್ಪೇ ನಡೆದಿಲ್ಲ ಅನ್ನುತ್ತಿದ್ದರು. ಈಗ ಸೈಟ್ ವಾಪಸ್ ಕೊಟ್ಟು ತಪ್ಪಾಗಿದೆ ಎನ್ನುವುದನ್ನು ಒಪ್ಪಿಕೊಂಡಂತಾಗಿದೆ ಎಂದು ತಿಳಿಸಿದರು.
ಹಿಂದೆ ಯಡಿಯೂರಪ್ಪ ಸೈಟ್ ವಾಪಸ್ ಮಾಡಿದಾಗ ಇದೇ ಸಿದ್ದರಾಮಯ್ಯ ಏನು ಹೇಳಿದ್ದರು ಎಂಬುದನ್ನು ನೆನಪಿಸಿಕೊಳ್ಳಲಿ. ಯಡಿಯೂರಪ್ಪ ತಪ್ಪನ್ನು ಒಪ್ಪಿಕೊಂಡಿದ್ದಾರೆ ಅಂದಿದ್ದರು. ಈಗ ಇದೇ ಮಾತು ಸಿದ್ದರಾಮಯ್ಯನವರಿಗೂ ಅನ್ವಯವಾಗುತ್ತದೆ. ಸೈಟ್ ವಾಪಸ್ನೊಂದಿಗೆ ಅಕ್ರಮ ಆಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ: ಸೈಟ್ ವಾಪಸ್ ನಿರ್ಧಾರ ತಪ್ಪು ಒಪ್ಪಿಕೊಂಡಂತೆ, ಕೂಡಲೇ ಸಿಎಂ ರಾಜೀನಾಮೆ ನೀಡಬೇಕು: ವಿಜಯೇಂದ್ರ - Muda Case
ಇನ್ನೊಂದೆಡೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಕೂಡಲೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಅದಕ್ಕೂ ಮುನ್ನ ರಾಜ್ಯಪಾಲರ ಬಳಿ ಕ್ಷಮಾಪಣೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.