ಶಿವಮೊಗ್ಗ: "ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ. ಸದ್ಯಕ್ಕೆ ಬಿ ವೈ ವಿಜಯೇಂದ್ರ ಅಧ್ಯಕ್ಷರಾಗಿದ್ದಾರೆ. ಅವರು ದಕ್ಷ ನಾಯಕರಾಗಿ ಸಂಘಟನೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆ ಬರುತ್ತಿದೆ. ಈ ಸಂದರ್ಭದಲ್ಲಿ ಏನೇ ಅಸಮಾಧಾನ ಇದ್ದರೂ ನಾಲ್ಕು ಗೋಡೆ ಮಧ್ಯೆ ಮಾತಾಡಬೇಕು. ಈ ದಿಕ್ಕಿನಲ್ಲಿ ನಮ್ಮ ನಾಯಕರು ಗಮನ ಹರಿಸಬೇಕು" ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನವರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಬದಲಾಗುತ್ತಾರೆ ಎಂಬ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ವಕ್ಫ್ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ 150 ಕೋಟಿ ಆಫರ್ ವಿಚಾರದ ಬಗ್ಗೆ ಮಾತನಾಡಿ, "ಕಾಂಗ್ರೆಸ್ ನವರು ಅವರ ತಪ್ಪನ್ನು ಮುಚ್ಚಿಕೊಳ್ಳಲು ಸುಳ್ಳು ಹೇಳುತ್ತಿದ್ದಾರೆ. ಅಧಿವೇಶನ ನಡೆಯುತ್ತಿರುವಾಗ ಜನರ ದಾರಿ ತಪ್ಪಿಸಲು ಈ ರೀತಿ ಆರೋಪ ಮಾಡುತ್ತಿದ್ದಾರೆ. ವಿಷಯವನ್ನು ಡೈವರ್ಟ್ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ" ಎಂದು ತಿರುಗೇಟು ನೀಡಿದರು.
"70 ವರ್ಷಗಳ ಹಿಂದೆ ಶರಾವತಿ ಜಲ ವಿದ್ಯುತ್ ಯೋಜನೆಯಡಿ ಸಂತ್ರಸ್ತರಾದವರಿಗೆ ಭೂಮಿಯನ್ನು ಡಿ ರೀಸರ್ವ್ ಮಾಡಲು ಚರ್ಚೆ ನಡೆದಿತ್ತು. 9,136 ಎಕರೆಯಲ್ಲಿ ಪುನರ್ವಸತಿ ಕಲ್ಪಿಸುವ ಯತ್ನ ಮಾಡಲಾಗಿತ್ತು. ಆದರೆ ಅದಕ್ಕೆ ಬೇಕಾದ ದಾಖಲೆಯಾದ ಪಟ್ಟಾವನ್ನು ನೀಡಿರಲಿಲ್ಲ. ಸರ್ಕಾರಗಳ ಬದಲಾವಣೆಯಿಂದ ಪ್ರಯತ್ನ ಮಾಡಿರಲಿಲ್ಲ. ದೆಹಲಿಗೆ ಈ ವಿಷಯವನ್ನು ತೆಗೆದುಕೊಂಡು ಹೋಗುವ ಪ್ರಯತ್ನವನ್ನು ಯಡಿಯೂರಪ್ಪನವರ ನೇತೃತ್ವದಲ್ಲಿ ಮಾಡಲಾಯಿತು. ಆಗ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಬೇಕು ಎಂದು ಹೇಳಿತ್ತು. ಈಗಿನ ಸರ್ಕಾರ ಮೇಲ್ಮನವಿ ಹಾಕಿದೆ" ಎಂದರು.
"ಶರಾವತಿ ಸಂತ್ರಸ್ತರಿಗೆ ಧ್ವನಿಯಾಗುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಸುಪ್ರೀಂಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಇದನ್ನು ಕೂತು ಬಗೆಹರಿಸಿಕೊಳ್ಳಬಹುದೇ ಎಂದು ಕೇಳಿದೆ. ಕೇಂದ್ರದ ಅರಣ್ಯ ಸಚಿವರಾದ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಲಾಯಿತು. ಈ ವೇಳೆ ಸಚಿವರು ನಾವು ನಿಮ್ಮೊಂದಿಗೆ ಇರುತ್ತೇನೆ ಎಂದು ಹೇಳಿದ್ದಾರೆ. ರಾಜ್ಯ ಐಎ ಹಾಕಿದ ತಕ್ಷಣ ಕೆಲಸ ಮುಗಿಯಲ್ಲ. ಕೋರ್ಟ್ಗೆ ಸರಿಯಾದ ಮಾಹಿತಿ ನೀಡಬೇಕಿದೆ" ಎಂದು ಹೇಳಿದರು.
ಕುಮಾರ್ ಬಂಗಾರಪ್ಪ ತಿರುಕನ ಕನಸು ಕಾಣುತ್ತಿದ್ದಾರೆ: ಮತ್ತೊಂದೆಡೆ, ದಾವಣಗೆರೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿ, "ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡೋದಂದ್ರೆ ಆಡೋ ಹುಡುಗರ ಆಟನಾ?. ಕುಮಾರ್ ಬಂಗಾರಪ್ಪ ಅವರು ತಿರುಕನ ಕನಸು ಕಾಣುತ್ತಿದ್ದಾರೆ. ಅವರ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಸ್ವಯಂಕೃತ ಅಪರಾಧದಿಂದ ಸೋತ್ರು" ಎಂದು ಜನವರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗುತ್ತಾರೆಂಬ ಕುಮಾರ್ ಬಂಗಾರಪ್ಪ ಹೇಳಿಕೆಗೆ ತಿರುಗೇಟು ನೀಡಿದರು.
"ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡೋಕೆ ರಾಷ್ಟ್ರೀಯ ನಾಯಕರು ಹೇಳಿದ್ರಾ?. ಇವರಿಗೆ ಅಧಿಕಾರ ಕೊಟ್ಟಿದ್ದು ಯಾರು?. ಇವರ ಕ್ಷೇತ್ರಕ್ಕೆ ಕೊಡುಗೆ ಏನು ಅನ್ನೊದು ಅಲ್ಲಿನ ಜನರಿಗೆ ಗೊತ್ತಿದೆ. ಇದೇ ಕಾರಣದಿಂದ ಸ್ಥಳೀಯವಾಗಿ ಬಿಜೆಪಿಯವರನ್ನೇ ಮುಗಿಸಿದ್ರು. ಕ್ಷೇತ್ರದ ಅಭಿವೃದ್ಧಿ ಇಲ್ಲ, ಜನರ ಕೈಗೆ ಸಿಕ್ತಿಲ್ಲ ತನ್ನದೇ ಸಾಮ್ರಾಜ್ಯ ಮಾಡಿಕೊಂಡು ಓಡಾಟ ಮಾಡಿದ್ರು. ಇದೇ ಕಾರಣದಿಂದ ಸೋಲು ಕಂಡಿದ್ದಾರೆ. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ವಿಜಯೇಂದ್ರ ಅವರೇ ಅಧ್ಯಕ್ಷರಾಗಿ ಇರ್ತಾರೆ ಅನ್ನೋದು ಕೂಡಾ ಅಷ್ಟೇ ಸತ್ಯ. ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆಗಳನ್ನು ಎದುರಿಸುತ್ತೇವೆ " ಎಂದು ಹೇಳಿದರು.
ಇದನ್ನೂ ಓದಿ: ₹150 ಕೋಟಿ ಆಮಿಷ ಆರೋಪ: ಸಿಬಿಐಗೆ ವಹಿಸಲು ವಿಜಯೇಂದ್ರ ಸವಾಲು: ಕಾಂಗ್ರೆಸ್ - ಬಿಜೆಪಿ ವಾಕ್ಸಮರ