ಯಾದಗಿರಿ : ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ಮಗನ ಜತೆಗೆ ತಾಯಿ ಕೂಡ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿರುವ ಅಪರೂಪದ ಘಟನೆ ನಡೆದಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಮಲ್ಲಿಕಾರ್ಜುನ ಶಿವಣ್ಣಚೌಡ ಗುಂಡ ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ತಾಯಿ ಗಂಗಮ್ಮನೊಂದಿಗೆ ಪರೀಕ್ಷಾ ಕೇಂದ್ರದಲ್ಲಿ ಕಾಲಿಡುತ್ತಿದ್ದಂತೆ, ಇತರ ವಿದ್ಯಾರ್ಥಿಗಳು ನಿಬ್ಬೆರಗಾಗಿ ನೋಡಿದ್ದಾರೆ.
9ನೇ ತರಗತಿ ವರೆಗೂ ಓದಿದ್ದ ತಾನು ಕಾರಣಾಂತರದಿಂದ ಶಾಲೆ ಬಿಡಬೇಕಾಯಿತು. ಈ ನಡುವೆ ಮದುವೆ ಸಹ ಆಯಿತು. ಮದುವೆಯಾದ ಮೇಲೂ ಶಾಲೆಗೆ ಹೋಗುತ್ತಿದ್ದೆ. ಆದರೆ, ವೈಯಕ್ತಿಯ ಕಾರಣಗಳಿಂದ ಓದುವುದನ್ನು ನಿಲ್ಲಿಸಿದ್ದೆ. ಸದ್ಯ ಮಹಿಳಾ ಸ್ವ-ಸಹಾಯ ಸಂಘದಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದು, ಎಸ್ಎಸ್ಎಲ್ಸಿ ಪ್ರಮಾಣ ಪತ್ರ ಅವಶ್ಯಕತೆ ಇರುವುದರಿಂದ ಪರೀಕ್ಷೆಗೆ ಹಾಜರಾಗಿರುವುದಾಗಿ ಗಂಗಮ್ಮ ತಿಳಿಸಿದ್ದಾರೆ.
ಒಂದೇ ಪರೀಕ್ಷೆ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿರುವುದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ. ಅಚ್ಚರಿ ಸಂಗತಿ ಎಂದರೆ 32ರ ಹರೆಯದಲ್ಲಿ ತಾಯಿ ತನ್ನ ಮಗನೊಂದಿಗೆ ಪರೀಕ್ಷೆ ಬರೆಯುತ್ತಿರುವುದು ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಎನಿಸಿದೆ.
ಇದನ್ನೂ ಓದಿ : ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ-1: ಬಿಸಿಯೂಟದ ವ್ಯವಸ್ಥೆ, ನಕಲು ತಡೆಗೆ ಕಟ್ಟುನಿಟ್ಟಿನ ಕ್ರಮ - SSLC Exams