ಬೆಳಗಾವಿ: ತಾಯಿ ಹಾಲು ಅಮೃತಕ್ಕೆ ಸಮ. ಹುಟ್ಟಿದ ಮಗುವಿಗೆ ಅದುವೇ ಜೀವಾಮೃತ. ತಾಯಿ ಹಾಲಿಗೆ ಪರ್ಯಾಯ ಕೂಡಾ ತಾಯಿ ಹಾಲೇ. ರೋಗ ನಿವಾರಣೆಯ ದಿವ್ಯ ಪೌಷ್ಟಿಕಾಂಶ ಹೊಂದಿರುವ ಆ ಹಾಲು ಸಿಗದೇ ಅದೆಷ್ಟೋ ಕಂದಮ್ಮಗಳು ಕೊನೆಯುಸಿರೆಳೆದ ಸಾಕಷ್ಟು ನಿದರ್ಶನಗಳಿವೆ. ಈ ನಿಟ್ಟಿನಲ್ಲಿ ಇದೀಗ ಬೆಳಗಾವಿ ಜಿಲ್ಲಾಸ್ಪತ್ರೆ ತಾಯಿ ಎದೆ ಹಾಲು ಬ್ಯಾಂಕ್ ಸ್ಥಾಪಿಸಿದೆ.
ಜಿಲ್ಲಾಸ್ಪತ್ರೆಗೆ ದಾಖಲಾಗುವ ಗರ್ಭಿಣಿಯರಿಗೆ ಹೆರಿಗೆಯಾದ ಬಳಿಕ ಅಗತ್ಯಕ್ಕೆ ತಕ್ಕಷ್ಟು ಪ್ರಮಾಣದಲ್ಲಿ ಎದೆಹಾಲು ಬರುವುದಿಲ್ಲ. ಕೆಲವು ಬಾಣಂತಿಯರು ಮೃತಪಟ್ಟರೆ, ಇನ್ನು ಕೆಲವು ಅನಾಥ ಶಿಶುಗಳು ಇರುತ್ತವೆ. ಇಂಥ ಮಕ್ಕಳಿಗೆ ಹಾಲಿನ ಕೊರತೆ ನೀಗಿಸಲು ಜಿಲ್ಲಾಸ್ಪತ್ರೆಯಲ್ಲಿ 'ಮಿಲ್ಕ್ ಬ್ಯಾಂಕ್' ತೆರೆಯಲಾಗಿದೆ. ಆರೋಗ್ಯವಂತ ತಾಯಂದಿರಿಂದ ಹಾಲು ಪಡೆದು ಈ ಬ್ಯಾಂಕ್‌ನಲ್ಲಿ ಸಂಗ್ರಹಿಸಿಡಲಾಗುತ್ತದೆ. ಹೀಗೆ ಪಡೆದ ಹಾಲನ್ನು ಸಂಸ್ಕರಿಸಿದ ಬಳಿಕ ಅಗತ್ಯವಿರುವ ಶಿಶುಗಳಿಗೆ ನೀಡುವ ಗುರಿ ಹೊಂದಲಾಗಿದೆ.
ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗದ ಪಕ್ಕದಲ್ಲಿರುವ ಎನ್ಐಸಿಯು (ನವಜಾತ ತೀವ್ರ ನಿಗಾ ಘಟಕ) ಬಳಿ ತಾಯಿ ಎದೆ ಹಾಲು ಬ್ಯಾಂಕ್ ಇದೆ. ಆಸ್ಪತ್ರೆಗೆ ದಾಖಲಾಗಿರುವ ಆರೋಗ್ಯವಂತ ತಾಯಂದಿರಿಗೆ ಹಾಲು ದಾನ ಮಾಡುವ ಬಗ್ಗೆ ವೈದ್ಯರು ಮನವೊಲಿಸುತ್ತಿದ್ದಾರೆ. ತಾಯಂದಿರು ಸ್ವಯಂ ಪ್ರೇರಣೆಯಿಂದ ಹೋಗಿ ಹಾಲು ದಾನ ಮಾಡಬಹುದು. ಮಿಲ್ಕ್ ಬ್ಯಾಂಕ್ ಬಗ್ಗೆ ಆಸ್ಪತ್ರೆಯ ವೈದ್ಯರು ಜಾಗೃತಿ ಮೂಡಿಸಲು ಯೋಜನೆಯನ್ನೂ ರೂಪಿಸಿದ್ದಾರೆ.
ತಾಯಿ ಎದೆ ಹಾಲು ಬ್ಯಾಂಕ್ ಸದ್ಯ ಬೆಂಗಳೂರಿನ ವಾಣಿ ವಿಲಾಸ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅದು ಬಿಟ್ಟರೆ ಎರಡನೇಯದು ಬೆಳಗಾವಿಯಲ್ಲಿ ಆರಂಭವಾಗುತ್ತಿದೆ. ಮಿಲ್ಕ್ ಬ್ಯಾಂಕ್ಗೆ ಅಗತ್ಯವಿರುವ ಮಿಲ್ಕ್ ಸಕ್ ಮಷಿನ್, ಡೀಪ್ ಫ್ರೀಜರ್, ರೆಫ್ರಿಜಿರೇಟರ್, ಲಾಮಿನಾರ್ ಏರ್ ಫ್ಲೋ, ಪಾಶ್ಚರೈಸರ್, ಹಾಟ್ ಏರ್ ಓವೆನ್ ಉಪಕರಣಗಳೂ ಸೇರಿದಂತೆ ಹಾಲು ಸಂಗ್ರಹಿಸಲು ಬೇಕಾದ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಶೀಘ್ರದಲ್ಲೇ 'ಮಿಲ್ಕ್ ಬ್ಯಾಂಕ್' ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ.
ಚಿಕ್ಕ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಶೈಲೇಶ ಪಾಟೀಲ 'ಈಟಿವಿ ಭಾರತ್'ಗೆ ಪ್ರತಿಕ್ರಿಯಿಸಿ, "ತಾಯಿ ಎದೆಹಾಲು ಬ್ಯಾಂಕ್ ಎಂದರೆ ಅಮೃತಧಾರೆ. ಸಮಗ್ರ ಹಾಲುಣಿಸುವ ನಿರ್ವಹಣಾ ಕೇಂದ್ರ. ಇನ್ನು ಹಾಲನ್ನು ಪಡೆಯುವ ಮುನ್ನ ತಾಯಿಯ ಅನುಮತಿ ಪಡೆಯಲಾಗುತ್ತದೆ. ಅಲ್ಲದೆ ತಾಯಿಗೆ ಅವಶ್ಯವಿರುವ ರಕ್ತ ಪರೀಕ್ಷೆಗಳನ್ನು ಮಾಡಿ, ಯಾವುದೇ ಸೋಂಕುಗಳು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ದಾನಿಗಳಿಂದ ಹಾಲು ಪಡೆಯಲಾಗುತ್ತದೆ. ಹಾಲಿನ ಅವಶ್ಯಕತೆಯಿರುವ ಮಕ್ಕಳಿಗೆ ಆ ಹಾಲು ನೀಡಲಾಗುತ್ತದೆ. ಇನ್ನು ಆರು ತಿಂಗಳವರೆಗೆ ಶೇಖರಿಸಿಟ್ಟ ಹಾಲನ್ನು ಉಪಯೋಗಿಸಬಹುದು" ಎಂದು ವಿವರಿಸಿದರು.
ಬಿಮ್ಸ್ ನಿರ್ದೇಶಕ ಡಾ.ಅಶೋಕಕುಮಾರ ಶೆಟ್ಟಿ ಮಾತನಾಡಿ, "ಕೆಲವು ತಾಯಂದಿರಲ್ಲಿ ಹಾಲಿನ ಪ್ರಮಾಣ ಜಾಸ್ತಿಯಾಗಿರುತ್ತದೆ. ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದುಕೊಂಡು ಎದೆ ಹಾಲನ್ನು ಹೊರಗೆ ಹಾಕುತ್ತಿರುತ್ತಾರೆ. ಅಂಥವರಿಂದ ಹಾಲು ಸಂಗ್ರಹಿಸಿ, ಆ ಹಾಲನ್ನು ಪಾಶ್ಚರೈಸೇಶನ್ ಮಾಡಿ, ಅವಶ್ಯಕತೆ ಇರುವ ಮಕ್ಕಳಿಗೆ ಕುಡಿಸಲಾಗುತ್ತದೆ. ಎದೆ ಹಾಲು ಬ್ಯಾಂಕ್ ಉದ್ಘಾಟನೆಗೆ ಅಂತಿಮ ಘಟ್ಟ ತಲುಪಿದ್ದು, ಬಾಟಲಿಗಳನ್ನು ಸ್ಟೆರಿಲೈಸ್ಡ್ ಮಾಡುವ ಮಷಿನ್ ರಿಪೇರಿಗೆ ಬಂದಿದ್ದು, ಅದು ರಿಪೇರಿ ಆದ ತಕ್ಷಣ ಬ್ಯಾಂಕ್ ಆರಂಭಿಸುತ್ತೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ಹುಬ್ಬಳ್ಳಿಯ 'ಬಡವರ ಸಂಜೀವಿನಿ' ಕಿಮ್ಸ್ ಆಸ್ಪತ್ರೆಯ ಹೆಸರು ಬದಲು; ಇದು 3ನೇ ಬಾರಿ - KIMS Rename