ಬೆಂಗಳೂರು: ''ಬಹುತೇಕ ಶೇಕಡಾ 75 ರಾಜ್ಯ ಲೋಕಸಭಾ ಕ್ಷೇತ್ರದಲ್ಲಿ ಸಿಂಗಲ್ ನೇಮ್ ಇದೆ. ಅಂತಿಮವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ'' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ರಾತ್ರಿ ನಡೆದ ಕಾಂಗ್ರೆಸ್ ಚುನಾವಣೆ ಸಮಿತಿ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್, ಎಐಸಿಸಿ ಚುನಾವಣೆ ಅಭ್ಯರ್ಥಿಗಳ ಪರಿಶೀಲನೆ ಸಮಿತಿ ಅಧ್ಯಕ್ಷ ಹರೀಶ್ ಚೌಧರಿ, ಸದಸ್ಯರಾದ ವಿಶ್ವಜಿತ್ ಕದಂ, ಎಐಸಿಸಿ ಕಾರ್ಯದರ್ಶಿಗಳಾದ ಅಭಿಷೇಕ್ ದತ್, ಮಯೂರ್ ಜೈಕುಮಾರ್, ರೋಜಿ ಜಾನ್ ಭಾಗವಹಿಸಿದ್ದರು.
ಸಭೆ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್, ''ಇಂದಿನ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಹೆಚ್ಚು ಕಡಿಮೆ ಎಲ್ಲಾ ಚರ್ಚೆ ಆಗಿದೆ. ಸೆಂಟ್ರಲ್ ಎಲೆಕ್ಷನ್ ಕಮಿಟಿ ಯಾವತ್ತೂ ಬೇಕಾದರೂ ನಮ್ಮನ್ನು ಕರೆಯಬಹುದು. ಮಾ. 14 ರಂದು ಅಥವಾ 15 ರಂದು ಹೈಕಮಾಂಡ್ ನಾಯಕರು ನಮ್ಮನ್ನು ಕರೆಯುತ್ತಾರೆ. ನಾನು ಹಾಗೂ ಸಿದ್ದರಾಮಯ್ಯ ದೆಹಲಿಗೆ ಹೋಗುತ್ತೇವೆ. ನಾವು ಎಷ್ಟೇ ಚರ್ಚೆ ಮಾಡಿದ್ರು, ಅಂತಿಮವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ'' ಎಂದರು.
ಸಿಎಎ ಜಾರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ''ಕೇಂದ್ರ ಸರ್ಕಾರ ಮೂರುವರೆ ವರ್ಷ ನಿದ್ರೆ ಮಾಡುತ್ತಿತ್ತು. ಈಗ ಎಲೆಕ್ಷನ್ ಬಂದಿದೆ, ಈಗ ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಜಾತಿ ಹೋರಾಟ ನಡೀತು. ಈ ದೇಶದಲ್ಲಿ ಶಾಂತಿ ಕದಡಬೇಕು ಎಂದು ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಎಲ್ಲಾ ಜಾತಿ ಧರ್ಮ ರಕ್ಷಣೆ ಮಾಡುವುದು ನಮ್ಮ ಪಕ್ಷದ ಕರ್ತವ್ಯ. ನಾವು ಇದನ್ನು ಖಂಡಿಸುತ್ತೇವೆ'' ಎಂದು ತಿಳಿಸಿದರು.
ಅನಂತ್ ಕುಮಾರ್ ಹೆಗಡೆ ಸಂವಿಧಾನ ತಿದ್ದುಪಡಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ''ಇದು ಖಂಡನೀಯ. ಅಂಬೇಡ್ಕರ್, ಕಾಂಗ್ರೆಸ್ ಸರ್ಕಾರ ಇದ್ದಾಗ ಕೊಟ್ಟಿರುವ ಸಂವಿಧಾನ. ನಾವೆಲ್ಲರೂ ಆ ಸಂವಿಧಾನದಲ್ಲಿ ಬದುಕುತ್ತೇವೆ. ರಕ್ಷಣೆ ಸಿಗುತ್ತಿದೆ. ಬಿಜೆಪಿ ಇದು ವೈಯಕ್ತಿಕ ವಿಚಾರ ಅಂತಾರೆ. ಸಂಸದರು ಮಾಡಿದ್ದು ಹೇಗೆ ವೈಯಕ್ತಿಕ ವಿಚಾರ ಆಗುತ್ತೆ. ಇದಕ್ಕೆ ಅವರ ಪಕ್ಷದವರು ಕುಮ್ಮಕ್ಕು ಕೊಟ್ಟಿದ್ದಾರೆ. ಇಂತಹದಕ್ಕೆ ಎಲೆಕ್ಷನ್ ಸಮಯದಲ್ಲಿ ಸರಿಯಾದ ಪಾಠ ಕಲಿಸಬೇಕು'' ಎಂದು ಕಿಡಿಕಾರಿದರು.
ಇದನ್ನೂ ಓದಿ: ಬಿಜೆಪಿ ಸಿಇಸಿ ಸಭೆ ಮುಕ್ತಾಯ: ಕರ್ನಾಟಕ, ತೆಲಂಗಾಣ ಸೇರಿ 7 ರಾಜ್ಯಗಳ 90 ಅಭ್ಯರ್ಥಿಗಳ ಹೆಸರು ಅಂತಿಮ