ಮಂಡ್ಯ: ಕಾವೇರಿ ಕಣಿವೆಯಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಕಾವೇರಿ ನದಿ ಅಪಾಯದಮಟ್ಟ ಮೀರಿ ಹರಿಯುತ್ತಿದೆ. ಕೆಆರ್ಎಸ್ ಅಣೆಕಟ್ಟೆಗೆ 1 ಲಕ್ಷ ಕ್ಯೂಸೆಕ್ಗೂ ಹೆಚ್ಚು ಒಳಹರಿವು ಇರುವುದರಿಂದ 1,30,000 ಕ್ಯೂಸೆಕ್ಗೂ ಹೆಚ್ಚು ನೀರನ್ನು ಅಣೆಕಟ್ಟೆಯಿಂದ ಬಿಡುಗಡೆ ಮಾಡಲಾಗುತ್ತಿದೆ.
ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿ ಬಿಟ್ಟಿರುವುದರಿಂದ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮ, ಪಶ್ಚಿಮ ವಾಹಿನಿ, ಸ್ನಾನಘಟ್ಟೆ, ಶ್ರೀಸಾಯಿ ಮಂದಿರ, ವೆಲ್ಲೆಸ್ಲಿ ಸೇತುವೆ, ಕೋಟೆ ಗಣಪತಿ ದೇವಸ್ಥಾನ ಭಾಗಶಃ ಮುಳುಗಡೆಯಾಗಿದೆ. ನಿಮಿಷಾಂಬ ದೇವಾಲಯದ ಮೆಟ್ಟಿಲುಗಳವರೆಗೆ ನದಿಯ ನೀರು ಏರಿಕೆಯಾಗಿದ್ದು, ದೇವಾಲಯದ ಮುಂಭಾಗದ ರಸ್ತೆಯೂ ಜಲಾವೃತವಾಗಿದೆ. ಅಲ್ಲದೇ ಕಾವೇರಿ ನದಿ ತೀರದ ತಗ್ಗು ಪ್ರದೇಶಗಳು ಭಾಗಶಃ ಮುಳುಗಡೆಗೊಂಡಿವೆ. ಕೆಲವೆಡೆ ಜಮೀನುಗಳಿಗೆ ನೀರು ನುಗ್ಗಿದ್ದು, ಭತ್ತದ ನಾಟಿಗೆ ಸಿದ್ಧತೆ ಮಾಡಿಕೊಂಡಿದ್ದ ರೈತರಿಗೆ ಸಂಕಷ್ಟ ತಂದೊಡ್ಡಿದೆ.
ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ: ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿನ ಕಾವೇರಿ ನದಿ ಪಾತ್ರದ ತಗ್ಗು ಪ್ರದೇಶದಲ್ಲಿರುವ ಹಾಗೂ ನದಿಯ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ಹಾಗೂ ರೈತರು ತಮ್ಮ ಆಸ್ತಿ - ಪಾಸ್ತಿ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ವಹಿಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಧಿಕಾರಿ ಡಾ.ಕುಮಾರ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹಿರಣ್ಯಕೇಶಿಯಲ್ಲಿ ಹೆಚ್ಚಿದ ನೀರು; ಸಂಕೇಶ್ವರದಲ್ಲಿ ಜಲಾವೃತವಾದ ಶಿವಲಿಂಗಕ್ಕೆ ಪೂಜೆ! - Flood Water in Ancient Temple