ಬೆಂಗಳೂರು: ಯುಜಿಸಿಇಟಿ-2024ರ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆ ನಂತರ ಒಟ್ಟು 13,653 ಎಂಜಿನಿಯರಿಂಗ್ ಸೀಟುಗಳು ಹಂಚಿಕೆಯಾಗದೆ ಬಾಕಿ ಉಳಿದಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಎಂಜಿನಿಯರಿಂಗ್, ಕೃಷಿ, ಪಶುವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ (ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಹೊರತುಪಡಿಸಿ) ಒಟ್ಟು 1,11,294 ಸೀಟುಗಳ ಪೈಕಿ 85,259 ಸೀಟುಗಳು ಹಂಚಿಕೆಯಾಗಿದ್ದು, 26,036 ಸೀಟು ಇನ್ನೂ ಹಾಗೆಯೇ ಉಳಿದಿವೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಫಾರ್ಮಸಿ ವಿಭಾಗದಲ್ಲಿ 401, ನರ್ಸಿಂಗ್‌ನಲ್ಲಿ 11,673, ಯೋಗ ನ್ಯಾಚುರೋಪತಿ 125, ಕೃಷಿ (ಪ್ರಾಕ್ಟಿಕಲ್) 134 ಸೀಟುಗಳು ಹಂಚಿಕೆಯಾಗದೆ ಬಾಕಿ ಇವೆ. ಎರಡನೇ ಸುತ್ತಿನಲ್ಲಿ ಕೇವಲ ಸರ್ಕಾರಿ ಕೋಟಾದ ಸೀಟುಗಳನ್ನು ಮಾತ್ರ ಕೆಇಎ ಮೂಲಕ ಹಂಚಿಕೆ ಮಾಡಲು ಸರ್ಕಾರದಿಂದ ನಿರ್ದೇಶನ ಇದ್ದ ಕಾರಣ ನರ್ಸಿಂಗ್‌ನಲ್ಲಿ ಕೋಟಾದಲ್ಲಿ ಇಷ್ಟು ಸೀಟು ಉಳಿಯಲು ಕಾರಣವಾಗಿದ್ದು, ಸೀಟುಗಳನ್ನು ಹಂಚಿಕೆ ಮಾಡಿಲ್ಲ. ಹೀಗಾಗಿ ಈ ಸಂಖ್ಯೆ ದೊಡ್ಡದಿದೆ ಎಂದು ಅವರು ತಿಳಿಸಿದ್ದಾರೆ.
ಎಂಜಿನಿಯರಿಂಗ್ ವಿಭಾಗದಲ್ಲಿ ಒಟ್ಟು 79,907 ಸೀಟುಗಳ ಪೈಕಿ 66,254 ಸೀಟು ಹಂಚಿಕೆಯಾಗಿವೆ. ಕಂಪ್ಯೂಟರ್ ಮತ್ತು ಅದಕ್ಕೆ ಸಂಬಂಧಿಸಿದ ಇತರ ಎಂಜಿನಿಯರಿಂಗ್ ಕೋರ್ಸ್‌ಗಳ ಕೆಲ ಸೀಟುಗಳು ಬಿಟ್ಟರೆ ಬಹುತೇಕ ಎಲ್ಲ ಕಾಲೇಜುಗಳಲ್ಲೂ ಭರ್ತಿಯಾಗಿವೆ. ಆದರೆ, ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದಲ್ಲಿ ಅತಿ ಹೆಚ್ಚು ಸೀಟುಗಳು ಹಂಚಿಕೆಯಾಗದೆ ಉಳಿದಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಿವಿಲ್ ವಿಭಾಗದ ಒಟ್ಟು 5,723 ಸೀಟುಗಳ ಪೈಕಿ 2,883 ಸೀಟು ಹಂಚಿಕೆಯಾಗಿವೆ. ಹಾಗೆಯೇ 2,840 ಸೀಟು ಹಂಚಿಕೆಯಾಗದೇ ಬಾಕಿ ಇವೆ. ಅದೇ ರೀತಿ ಮೆಕ್ಯಾನಿಕಲ್ ವಿಭಾಗದಲ್ಲಿ 5,977 ಸೀಟುಗಳ ಪೈಕಿ 2,783 ಸೀಟು ಮಾತ್ರ ಹಂಚಿಕೆಯಾಗಿದ್ದು, ಇನ್ನೂ 3,194 ಸೀಟುಗಳನ್ನು ಯಾರೂ ತೆಗೆದುಕೊಂಡಿಲ್ಲ ಎಂದು ಅವರು ಅಂಕಿ ಅಂಶಗಳ ಸಮೇತ ವಿವರಿಸಿದ್ದಾರೆ.
ಹಾಗೆಯೇ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಒಟ್ಟು 18,794 ಸೀಟುಗಳು ಇದ್ದು, ಅದರಲ್ಲಿ 18,157 ಸೀಟು ಹಂಚಿಕೆಯಾಗಿವೆ. ಇಲ್ಲೂ 637 ಸೀಟುಗಳು ಹಂಚಿಕೆಯಾಗಬೇಕಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ನಲ್ಲಿ ಒಟ್ಟು 11,361 ಸೀಟುಗಳ ಪೈಕಿ 9,841 ಸೀಟು ಹಂಚಿಕೆಯಾಗಿವೆ. ಇನ್ನೂ 1,520 ಸೀಟು ಹಂಚಿಕೆಗೆ ಬಾಕಿ ಇವೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೇರಳದ ₹25 ಕೋಟಿ ಬಂಪರ್ ಲಾಟರಿ ಗೆದ್ದ ಮಂಡ್ಯದ ಮೆಕ್ಯಾನಿಕ್ ಅಲ್ತಾಫ್ ಕೈಗೆ ಸಿಗುವ ಹಣವೆಷ್ಟು ಗೊತ್ತೇ?