ರಾಮನಗರ: ಐಸ್ ಕ್ರೀಂ ಸವಿದ 100ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ಚನ್ನಪಟ್ಟಣ ತಾಲೂಕಿನ ಸಾತನೂರು ಬಳಿ ನಡೆದಿದೆ. ಸಾತನೂರು ವೃತ್ತದ ಬಳಿಯ ಪಾರ್ಟಿ ಹಾಲ್‌ನಲ್ಲಿ ಇತ್ತೀಚೆಗೆ ನಡೆದಿದ್ದ ಮದುವೆಯಲ್ಲಿ ಊಟ ಮಾಡಿ, ನಾಲ್ಕೈದು ತಾಸುಗಳ ಬಳಿಕ ಚನ್ನಪಟ್ಟಣ ಮತ್ತು ಮಾಗಡಿಯಲ್ಲಿ 100ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದರು. ಇದಕ್ಕೆ ಐಸ್ ಕ್ರೀಂ ಕಾರಣ ಎಂಬುದು ದೃಢಪಟ್ಟಿದೆ.
ಆಹಾರ ಸುರಕ್ಷತಾ ಅಧಿಕಾರಿಗಳು ಸಂಗ್ರಹಿಸಿದ್ದ ಆಹಾರದ ಮಾದರಿಯ ವರದಿ ಬಂದಿದ್ದು, ಘಟನೆಗೆ ಐಸ್ ಕ್ರೀಂ ಸೇವನೆ ಕಾರಣ ಎಂಬ ಮಾಹಿತಿ ಹೊರಬಿದ್ದಿದೆ. ಚನ್ನಪಟ್ಟಣದ ಮಿಲನ ಪಾರ್ಟಿ ಹಾಲ್‌ನಲ್ಲಿ ಮೇ 5ರಂದು ಘಟನೆ ನಡೆದಿತ್ತು. ಅಸ್ವಸ್ಥರಿಗೆ ಚನ್ನಪಟ್ಟಣ, ರಾಮನಗರ ಹಾಗೂ ಮಾಗಡಿಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು, ಮದುವೆಗೆ ಬಂದವರು ಸೇವಿಸಿದ್ದ ಆಹಾರ ಮತ್ತು ಐಸ್ ಕ್ರೀಂ ಮಾದರಿಯನ್ನು ಸಂಗ್ರಹಿಸಿದ್ದರು. ಮದುವೆಯಲ್ಲಿ ಊಟದ ಬಳಿಕ ನೀಡಲಾಗಿದ್ದ ಐಸ್ ಕ್ರೀಂ ಸುರಕ್ಷತೆಗೆ ಅನುಗುಣವಾಗಿಲ್ಲ. ಜೊತೆಗೆ ಅದನ್ನು ತಯಾರಿಸಿದ ಜಾಗದಲ್ಲಿ ನೈರ್ಮಲ್ಯ ಕೊರತೆ ಇದ್ದಿದ್ದರಿಂದ ಐಸ್ ಕ್ರೀಂ ಕಲುಷಿತವಾಗಿರುವುದು ವರದಿಯಲ್ಲಿ ಪತ್ತೆಯಾಗಿದೆ.
ಹಾಗಾಗಿ, ಐಸ್ ಕ್ರೀಂ ತಯಾರಿಸಿದ ಕಂಪನಿಗೆ ನೋಟಿಸ್ ನೀಡಿ, ಬೀಗ ಜಡಿಸಿ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು. ಅಲ್ಲದೇ, ಪಾರ್ಟಿ ಹಾಲ್‌ನಲ್ಲೂ ನೈರ್ಮಲ್ಯದ ಕೊರತೆ ಇದ್ದು, ಅದರ ಮಾಲೀಕರಿಗೂ ನೋಟಿಸ್ ನೀಡಲಾಗುವುದು ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: ಚನ್ನಗಿರಿಯಲ್ಲಿ ಆರೋಪಿ ಸಾವು ಪ್ರಕರಣ: 5 ವಾಹನಗಳಿಗೆ ಹಾನಿ, 11 ಪೊಲೀಸ್ ಸಿಬ್ಬಂದಿಗೆ ಗಾಯ - DAVANAGERE SP REACTION