ಬೆಂಗಳೂರು: ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ ಸೇರಿದಂತೆ ರಾಜ್ಯದ ಏಳಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂದಿನಿಂದ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಲ್ಲಿ ಗಾಳಿ ಮಳೆ ಪ್ರಮಾಣ ಹೆಚ್ಚಾಗಿದ್ದು, ಮುಂದಿನ ಐದು ದಿನಗಳ ಕಾಲ ಇದೇ ರೀತಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಬೀದರ್, ಗದಗ, ಹಾವೇರಿ, ಬಾಲಕೋಟೆ, ಕಲಬುರಗಿ, ವಿಜಯನಗರ, ತುಮಕೂರು, ರಾಯಚೂರು, ವಿಜಯಪುರ, ಕೊಪ್ಪಳ, ದಾವಣಗೆರೆ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ಇತರ ಕಡೆಗಳಲ್ಲೂ ಮಳೆಯಾಗಿದೆ. ಕಾರವಾರ, ಭಾಗಮಂಡಲ, ಆಗುಂಬೆ, ಧರ್ಮಸ್ಥಳ, ಶಿರಾಡಿಘಾಟ್, ಕಳಸ, ಬೆಳ್ತಂಗಡಿ, ಶೃಂಗೇರಿ, ಸುಳ್ಯ, ಕುಮಟಾ, ಯಲ್ಲಾಪುರ, ಕೊಲ್ಲೂರು, ಬಾಳೆಹೊನ್ನೂರು, ಎಚ್.ಡಿ. ಕೋಟೆಯಲ್ಲಿ ಹೆಚ್ಚಿನ ಮಳೆ ಬಿದ್ದಿದೆ.
ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಅಲ್ಲಲ್ಲಿ ತುಂತುರು ಹನಿ ಬೀಳುತ್ತಿದೆ. ನಗರದಲ್ಲಿ 26.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಇದೆ. ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣದಲ್ಲಿ ಗರಿಷ್ಠ 28.6, ಕನಿಷ್ಠ 21.3 ಡಿಗ್ರಿ ಸೆಲ್ಸಿಯಸ್ ಇದೆ. ಜಿಕೆವಿಕೆಯಲ್ಲಿ ಗರಿಷ್ಠ 28.0 ಡಿಗ್ರಿ, ಕನಿಷ್ಠ 19.2 ಡಿಗ್ರಿ ಸೆಲ್ಸಿಯಸ್ ಇದ್ದು, ಎಚ್ಎಎಲ್ನಲ್ಲಿ ಗರಿಷ್ಠ 26.9, ಕನಿಷ್ಠ 20.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಸಂಜೆಯಿಂದ ಭಾರಿ ಮಳೆ ಸುರಿಯುತ್ತಿದ್ದು, ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಂದು ಕೂಡ ಬಿರುಸಿನ ಮಳೆಯಾಗಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇನ್ನು ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲ ದಿನಗಳಿಂದ ಭಾರಿ ಮಳೆಗೆ ಬಿಡುವು ಇತ್ತಾದರೂ ಸೋಮವಾರದಿಂದ ಭಾರಿ ಗಾಳಿ ಮಳೆ ಸುರಿಯುತ್ತಿದೆ. ಅಬ್ಬರದ ಮಳೆಗೆ ಅರಬ್ಬಿ ಸಮುದ್ರ ಪ್ರಕ್ಷುಬ್ದಗೊಂಡಿದ್ದು, ಮಂಗಳೂರಿನ ಕಡಲ ತೀರದಲ್ಲಿ ಅಲೆಗಳು ತೀರಕ್ಕಪ್ಪಳಿಸುತ್ತಿವೆ. ಇಂದು ಮತ್ತು ನಾಳೆ ರೆಡ್ ಅಲರ್ಟ್ ನ್ನು ಹವಮಾನ ಇಲಾಖೆ ಘೋಷಿಸಿದೆ. ಆಗಸ್ಟ್ 1 ರಂದು ಆರೆಂಜ್ ಅಲರ್ಟ್, ಆಗಸ್ಟ್ 2ಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿ: ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ಅಪಾಯದ ಮಟ್ಟ 29 ಮೀಟರ್ ಆಗಿದ್ದು, ಇಂದು ನದಿಯು 29.6 ಮೀಟರ್ ತಲುಪಿದೆ. ಬಂಟ್ವಾಳದಲ್ಲಿ ನೇತ್ರಾವತಿ ನದಿ 8.2 ಮೀಟರ್ ಮುಟ್ಟಿದೆ. ಎಎಂಆರ್ ಬ್ಯಾರೇಜ್ ಲೆವೆಲ್ 18.8 ಮೀಟರ್ ಇದ್ದು, 12 ಗೇಟ್ ಗಳನ್ನು ತೆರೆಯಲಾಗಿದೆ.
ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಭೇಟಿ, ಪರಿಶೀಲನೆ: ಕೆತ್ತಿಕಲ್ ಗುಡ್ಡ ಕುಸಿತದ ಭೀತಿಯ ಪ್ರದೇಶಕ್ಕೆ ರಾಜ್ಯ ಸರಕಾರದ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಅವರು ಸೋಮವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯೊಂದಿಗೆ ಸರ್ಕಾರದ ನುರಿತ ಎಂಜಿನಿಯರ್ಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕುಸಿತ ಪ್ರದೇಶದಲ್ಲಿ ಅಧಿಕಾರಿಗಳು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದರು. ಬಳಿಕ ಶಿರೂರು ಕುಸಿತ ಪ್ರದೇಶದಲ್ಲಿರುವ ತಜ್ಞರ ತಂಡವನ್ನು ಕೆತ್ತಿಕಲ್ ಪ್ರದೇಶಕ್ಕೆ ಕರೆತಂದು ಪರಿಶೀಲನೆ ನಡೆಸಬೇಕು. ಕುಸಿತದ ಬಗ್ಗೆ ಮತ್ತು ಪರಿಹಾರಗಳ ಕುರಿತು ತಜ್ಞರಿಂದ ವರದಿ ಪಡೆಯುವಂತೆ ಡಾ. ಸೆಲ್ವಕುಮಾರ್ ಸೂಚನೆ ನೀಡಿದರು.
ಈ ವೇಳೆ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮನಪಾ ಆಯುಕ್ತ ಎಲ್.ಸಿ. ಆನಂದ್, ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಮಂಗಳೂರು ತಹಶೀಲ್ದಾರ್, ಎಚ್ಎಚ್ಐ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ವಯನಾಡ್ ಭೂಕುಸಿತ: ಜೀವ ಉಳಿಸಿಕೊಳ್ಳಲು ಅಂಗಲಾಚುತ್ತಿರುವ ಸಂತ್ರಸ್ತರು; ಇಂದೂ ಕೂಡಾ ಧಾರಾಕಾರ ಮಳೆ - Wayanad Landslide