ಬೆಂಗಳೂರು: ಕೇರಳಕ್ಕೆ ಮಾನ್ಸೂನ್ ಎಂಟ್ರಿ ಕೊಟ್ಟಿರುವ ಪರಿಣಾಮ ಅಲ್ಲಿ ಭಾರೀ ಮಳೆ ಆಗುತ್ತಿದೆ. ದೇವರನಾಡಿನ ಏಳು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಇದರ ಬೆನ್ನಲ್ಲೇ ಜೂನ್ 2ರಂದು ಮುಂಗಾರು ಮಾರುತಗಳು ರಾಜ್ಯದ ಕರಾವಳಿ ಪ್ರವೇಶಿಸಲಿವೆ. ಜೂನ್‌ನಲ್ಲಿ ವಾಡಿಕೆ ಮಳೆ ಸುರಿದರೆ, ಜುಲೈನಲ್ಲಿ ಜೋರು ಮಳೆ ಆಗಬಹುದು ಎಂದು ಕರ್ನಾಟಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಜೂನ್ 2ರಂದು ಹಾಗೂ ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಕೊಡಗು, ಕೋಲಾರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಜೂನ್ 3ರಂದು ಭಾರೀ ಮಳೆ ಸುರಿಯಲಿದೆ. ಆದ್ದರಿಂದ ಈ ಎಲ್ಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಇಲಾಖೆ ತಿಳಿಸಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಿಂದ ಮೇ 19ರಿಂದ ಮಾನ್ಸೂನ್ ಆರಂಭವಾಗಿದೆ. ಪೂರಕ ವಾತಾವರಣ ಇರುವುದು, ಮಾರುತಗಳು ಪ್ರಬಲವಾಗಿರುವ ಹಿನ್ನೆಲೆಯಲ್ಲಿ ಹಂತಹಂತವಾಗಿ ವ್ಯಾಪಿಸಿರುವ ಮಾನ್ಸೂನ್ ವಾಡಿಕೆಗಿಂತ ಮುನ್ನವೇ ಕೇರಳ ಪ್ರವೇಶಿಸಿದೆ. ಆ ಭಾಗದಲ್ಲಿ ಈಗಾಗಲೇ ಭಾರೀ ಮಳೆಯಾಗುತ್ತಿದೆ. ಪ್ರವಾಹ ಪರಿಸ್ಥಿತಿಯೂ ಉಂಟಾಗಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ.
ಜೂ.7ರ ವೇಳೆಗೆ ರಾಜ್ಯಾದ್ಯಂತ ಮುಂಗಾರು ಮಾರುತಗಳು ಪ್ರವೇಶಿಸಲಿವೆ. ಜೂ.2ರಿಂದಲೇ ಮಳೆ ಚುರುಕು ಪಡೆಯಲಿದೆ. ಕಳೆದ ವರ್ಷ ಸೃಷ್ಟಿಯಾಗಿದ್ದ 'ಎಲ್ ನಿನೋ' ಪರಿಣಾಮ ಮುಂಗಾರು ಮಳೆ ಕೊರತೆ ಉಂಟಾಗಿತ್ತು. ಅದು ಈಗಾಗಲೇ ದುರ್ಬಲಗೊಂಡು ಶೂನ್ಯ ಹಂತಕ್ಕೆ ಬಂದಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಜುಲೈ ಮೊದಲ ವಾರದಲ್ಲಿ ಮುಂಗಾರಿಗೆ ಪೂರಕವಾದ 'ಲಾ ನಿನಾ' ಉಂಟಾಗಲಿದೆ. ಇದರಿಂದಾಗಿ ರಾಜ್ಯದಲ್ಲಿ ಮುಂಗಾರು ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯಲಿದೆ. ಜೂನ್‌ನಿಂದ ಸೆಪ್ಟಂಬರ್‌ವರೆಗೆ ವಾಡಿಕೆ ಅಥವಾ ವಾಡಿಕೆಗಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ ಎಂದು ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.