ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರೆದಿದೆ. ಈ ಹಿನ್ನೆಲೆ ಪ್ರಮುಖವಾಗಿ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಿಗೆ ಎರಡು ದಿನಗಳಿಗೆ ಅನ್ವಯವಾಗುವಂತೆ ಹೈ ಅಲರ್ಟ್ಗಳನ್ನು ಘೋಷಿಸಲಾಗಿದೆ.
ಇಂದು ಸಂಜೆಯಿಂದ ಎರಡು ದಿನಗಳ ಕಾಲ ಕರಾವಳಿ ಜಿಲ್ಲೆಯಾದ ಉಡುಪಿಗೆ ಕ್ರಮವಾಗಿ ಆರೆಂಜ್ ಮತ್ತು ರೆಡ್ ಅಲರ್ಟ್ ನೀಡಲಾಗಿದೆ. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗೆ ಎರೆಡೂ ದಿನ ಆರೆಂಜ್ ಅಲರ್ಟ್ ಕೊಡಲಾಗಿದೆ. ಮಲೆನಾಡು ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗೆ ಕೂಡ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನ ಬೆಳಗಾವಿ ಮತ್ತು ದಕ್ಷಿಣ ಒಳನಾಡಿನ ಕೊಡಗು ಜಿಲ್ಲೆಗೆ ಯೆಲ್ಲೋ ಅಲರ್ಟ್ ಇರಲಿದೆ. ಉಳಿದಂತೆ ನಾಳೆ ಉತ್ತರ ಕಾರಾಂತಕ ಭಾಗದ ಕಲ್ಬುರ್ಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಅನ್ನು ಕೊಡಮಾಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ 48 ಗಂಟೆಗಳ ಕಾಲ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಿರಂತರ ಗಾಳಿಯ ವೇಗ ಪ್ರತಿ ಗಂಟೆಗೆ 30 ರಿಂದ 40 ಕಿಲೋಮೀಟರ್ ಇರಲಿದ್ದು, ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಳಗಾವಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ನಿರಂತರ ಗಾಳಿಯೊಂದಿಗೆ ಭಾರೀ ಮಳೆ ಸುರಿಯಲಿದೆ. ಇನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಮಂಡ್ಯ ಜಿಲ್ಲೆಗಳ ಅನೇಕ ಸ್ಥಳಗಳಲ್ಲಿ ಹಗುರದಿಂದ ಮಳೆಯಾಗಲಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಮೇಲೆ ಲಘುವಾಗಿ ಮಧ್ಯಮ ಮಳೆ ಮತ್ತು ನಿರಂತರ ಗಾಳಿ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಎರಡು ದಿನ ಕರಾವಳಿಯಲ್ಲಿ ಗಾಳಿಯ ವೇಗ ಗಂಟೆಗೆ 45 ರಿಂದ 55 ಕಿ.ಮೀ ಬೀಸಲಿದೆ, ಅತಿ ಭಾರಿ ಮಳೆಯಾಗಲಿದೆ. ಆದ್ದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಇಲಾಖೆ ಸೂಚಿಸಿದೆ.
ಸಿಲಿಕಾನ್ ಸಿಟಿಯಲ್ಲಿ ಹಗುರದಿಂದ ಸಾಧಾರಣ ಮಳೆ: ಬೆಂಗಳೂರು ನಗರ ಮತ್ತು ಸುತ್ತಮುತ್ತ ಸ್ಥಳಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ನಿರಂತರ ಗಾಳಿಯ ಸಾಧ್ಯತೆ ಹೆಚ್ಚಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27 ಡಿಗ್ರಿ ಮತ್ತು 20 ಡಿಗ್ರಿ ಆಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ: ನಿನ್ನೆಯಿಂದ ಅತಿ ಹೆಚ್ಚು ಮಳೆ 9 ಸೆಂ.ಮೀ. ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರು ವೀಕ್ಷಣಾಲಯದ ಸುತ್ತಮುತ್ತ, ಮಣಿ, ಶಿರಾಲಿಯಲ್ಲಿ ದಾಖಲಾಗಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಗೇರ್ಸೊಪ್ಪದಲ್ಲಿ 8 ಸೆಂ.ಮೀ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಸಿದ್ದಾಪುರದಲ್ಲಿ, ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ, ಚಿಕ್ಕಮಗಳೂರು ಜಿಲ್ಲೆ ಕೊಟ್ಟಿಗೆಹಾರದಲ್ಲಿ, ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ತಲಾ 7 ಸೆಂ.ಮೀ. ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹವಾಮಾನ ಇಲಾಖೆಯ ಮಾಹಿತಿ: ಸರಾಸರಿ ಸಮುದ್ರ ಮಟ್ಟದಲ್ಲಿ ಕಡಲಾಚೆಯ ಟ್ರಫ್ ದಕ್ಷಿಣ ಗುಜರಾತ್‌ನಿಂದ ಉತ್ತರ ಕೇರಳದ ಕರಾವಳಿಯವರೆಗೆ ಸಾಗುತ್ತಿದೆ. ಆದ್ದರಿಂದ ನೈಋತ್ಯ ಮಾನ್ಸೂನ್ ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡು ಮೇಲೆ ಸಕ್ರಿಯವಾಗಿದ್ದು, ಉತ್ತರ ಒಳನಾಡಿನಲ್ಲಿ ದುರ್ಬಲವಾಗಿದೆ. ಇಂದು ಕರಾವಳಿ ಕರ್ನಾಟಕದ ಬಹುತೇಕ ಕಡೆಗಳಲ್ಲಿ, ದಕ್ಷಿಣ ಒಳನಾಡಿನಲ್ಲಿ ಹಲವು ಸ್ಥಳಗಳಲ್ಲಿ ಮಳೆಯಾಗಿದೆ ಮತ್ತು ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಕೂಡ ಮಳೆ ಸುರಿದಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎನ್.ಪುವಿಯರಸನ್ ಹೇಳಿದ್ದಾರೆ.
ಓದಿ: ನಿಷ್ಕ್ರಿಯಗೊಂಡ ಕೊಳವೆಬಾವಿಗೆ ರಿಚಾರ್ಜ್; ಆಕಾಶದೆತ್ತರಕ್ಕೆ ಚಿಮ್ಮಿದ ನೀರು! ವಿಡಿಯೋ - Borewell recharge