ಹುಬ್ಬಳ್ಳಿ: ಮುಂಗಾರು ಮಳೆ ರೈತರಲ್ಲಿ ಮಂದಾಹಾಸ ಮೂಡಿಸಿದೆ. ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಬೀಜಗೊಬ್ಬರ ಖರೀದಿಯಲ್ಲಿ ತೊಡಗಿರುವ ರೈತರಿಗೆ ಬೆಲೆ ಏರಿಕೆ ಬಿಸಿ ತಟ್ಟಿದ್ದು, ಇದು ರೈತರನ್ನು ಕಂಗಾಲು ಮಾಡಿದೆ.
ಮುಂಗಾರು ಪೂರ್ವ ಉತ್ತಮ ಮಳೆ ಆಗುತ್ತಿದೆ. ಆದರೆ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿರುವ ಅನ್ನದಾತರಿಗೆ ಬರದ ಬೆನ್ನಲ್ಲೇ ಬಿತ್ತನೆ ಬೀಜದ ದರ ಏರಿಕೆ ಬರೆ ಎಳೆಯುತ್ತಿದೆ. ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ವಿತರಿಸುವ ಬೀಜದ ದರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಹೆಚ್ಚಳವಾಗಿದೆ.
ಪ್ರತಿ ಕೆಜಿಗೆ ವಿವಿಧ ಬಿತ್ತನೆ ಬೀಜದ ದರ ಹೆಚ್ಚಳವಾಗಿದೆ. ಅದರಲ್ಲಿಯೂ ಸೋಯಾಬಿನ್, ಹೆಸರು, ಉದ್ದು, ಮೆಕ್ಕೆಜೋಳ ಸೇರಿದಂತೆ ಮುಂಗಾರು ಬೆಳೆ ಬೀಜದ ದರ ಮಾತ್ರ ಪ್ರತಿ ಕೆಜಿಗೆ ಕನಿಷ್ಠ 5 ರಿಂದ 50ರೂ ವರೆಗೆ ಹೆಚ್ಚಳವಾಗಿದೆ. 5 ಎಕರೆಗೆ ಮಾತ್ರ ರಿಯಾಯಿತಿ ನೀಡಲಾಗುತ್ತಿದ್ದು ಉಳಿದ ಬೀಜ ಮಾರುಕಟ್ಟೆ ದರದಲ್ಲಿ ಖರೀದಿಸಬೇಕಾಗಿರುವ ಅನಿವಾರ್ಯತೆ ಇದೆ.
ರಾಸಾಯನಿಕ ಗೊಬ್ಬರ: ಇನ್ನೂ ಯೂರಿಯಾ 48 ಕೆಜಿಗೆ 266 ರೂ., ಡಿಎಪಿ 50 ಕೆಜಿಗೆ 1,350 ಎಂಒಪಿ 50 ಕೆಜಿಗೆ
1,700 ರೂ., ಎಸ್‌ಎಸ್‌ಪಿ 30 ಕೆಜಿಗೆ 500ರಿಂದ 700 ರೂ. ದರವಿದೆ. ಕಾಂಪ್ಲೆಕ್ಸ್‌ನಲ್ಲಿ 50 ಕೆಜಿಗೆ ಪ್ಯಾಕ್ಟ್ (20.20) 1,225ರೂ., ಪ್ಯಾಕ್ಟ್ 1,200 ರೂ. ಮತ್ತು ಇಪ್ಕೋ 1,250 ರೂ. ನಿಗದಿಪಡಿಸಲಾಗಿದೆ. ಕೆಲ ಸೊಸೈಟಿಗಳಲ್ಲಿ ಡಿಎಪಿ ಗೊಬ್ಬರ ತೆಗೆದುಕೊಳ್ಳುವಾಗ ಅದರೊಟ್ಟಿಗೆ ಒಂದು ಲೀಟರ್‌ನ ನ್ಯಾನೋ ಯೂರಿಯಾ ಲಿಕ್ವಿಡ್ ತೆಗೆದುಕೊಂಡರೆ ಮಾತ್ರ ಡಿಎಪಿ ಗೊಬ್ಬರ ಕೊಡುತ್ತಿದ್ದು, ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಬೀಜ, ಗೊಬ್ಬರ ಖರೀದಿ ಮಾಡಲು ಸರತಿ ಸಾಲಿನಲ್ಲಿ ನಿಂತು ಪಡೆಯುವ ಅನಿವಾರ್ಯತೆ ಇದೆ. ಕಳೆದ ಎರಡು ವರ್ಷ ಮಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಈಗ ಸರ್ಕಾರ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರೈತ ಅಪ್ಪಣ್ಣ ನದಾಫ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೀಜ ಗೊಬ್ಬರ ದಾಸ್ತಾನು: ಮುಂಗಾರು, ಬೀಜ ಗೊಬ್ಬರ ದಾಸ್ತಾನು ಬಗ್ಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಈಟಿವಿ ಭಾರತದೊಂದಿಗೆ ಮಾತನಾಡಿ, ಕಳೆದ ಒಂದು ವಾರದಲ್ಲಿ ಮಳೆ ಹೆಚ್ಚಳವಾಗಿದೆ. ಮೇ 16 ರಿಂದ ಮೇ 22 ರ ವರೆಗೆ ವಾಡಿಕೆಯಷ್ಟು 16 mm ಮಳೆ ಆಗಬೇಕಿತ್ತು. ಆದರೆ, ಒಂದು ವಾರದಲ್ಲಿ 47.3 mm ಮಳೆ ಆಗಿದೆ. ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ಬೀಜಗೊಬ್ಬರ ನೀಡಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಬಿತ್ತನೆಗೆ ಸಜ್ಜಾದ 2,70,840 ಹೆಕ್ಟೇರ್ ನಷ್ಟು ಗುರಿ ಇದೆ. 20,681 ಕ್ವಿಂಟಾಲ್ ಬೀಜ ಸದ್ಯ ಜಿಲ್ಲೆಯಲ್ಲಿ ಸ್ಟಾಕ್ ಇದೆ. ಜಿಲ್ಲೆಯಲ್ಲಿ ಬೇಡಿಕೆಗಿಂತ ಹೆಚ್ಚು ಬಿತ್ತನೆ ಬೀಜಗಳು ಸ್ಟಾಕ್ ಇದೆ ಎಂದು ತಿಳಿಸಿದ್ದಾರೆ.
31 ರೈತ ಸಂಪರ್ಕ ಕೇಂದ್ರ ದಲ್ಲಿ ಬೀಜ ವೀತರಣೆ ಮಾಡಲು ಜಿಲ್ಲಾಡಳಿತ ಸಜ್ಜಾಗಿದೆ.ರೈತರು ಸದುಪಯೋಗ ಪಡಿಸಿಕ್ಕೊಳ್ಳಬೇಕು. ಎಲ್ಲಿಯವರೆಗೆ ರೈತರಿಗೆ ಬೀಜ ಅವಶ್ಯಕತೆ ಇದೆ ಅಲ್ಲಿಯವರೆಗೆ ಬೀಜ ವೀತರಣೆ ಮಾಡಲಾಗುವುದು. 56,843 ಮೆಟ್ರಿಕ್ ಟನ್ ಗಳಷ್ಟು ಗೊಬ್ಬರದ ಅವಶ್ಯಕತೆ ಇದೆ.33,240 ಮೆಟ್ರಿಕ್ ಟನ್ ಗೊಬ್ಬರ ಸ್ಟಾಕ್ ಇದೆ. ಡಿಎಪಿ, ಯೂರಿಯಾ, ಗೊಬ್ಬರಗಳು ಸ್ಟಾಕ್ ಇವೆ.ಎಲ್ಲ ರೈತರು ಮುಂಗಾರು ಹಂಗಾಮಿಗೆ ಎಲ್ಲರೂ ಉಪಯೋಗ ಮಾಡಿಕ್ಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಒಟ್ಟಿನಲ್ಲಿ ಮುಂಗಾರು ಪೂರ್ವ ಸುರಿದ ಮಳೆ ರೈತರ ಮುಖದಲ್ಲಿ ಹರ್ಷವನ್ನುಂಟು ಮಾಡಿದೆ. ರೈತರು ಖಷಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ಆದರೆ ಬಿತ್ತನೆ ಬೀಜ,ಗೊಬ್ಬರದ ಬೆಲೆ ಏರಿಕೆ ಬಿಸಿ ತಟ್ಟಿದೆ. ಜಿಲ್ಲಾಡಳಿತವು ಬರಗಾಲದಿಂದ ಕಂಗೆಟ್ಟಿರುವ ರೈತರ ಪರ ನಿಲ್ಲಬೇಕಿದೆ.