ಬೆಳಗಾವಿ: ಮೊದಲು ಹಾಗೂ ಎರಡನೇ ಹಂತದ ಲೋಕಸಭೆ ಚುನಾವಣೆಗಳಲ್ಲಿ ಎನ್ಡಿಎ ಅಧಿಕಾರಕ್ಕೆ ಬರುವುದಿಲ್ಲ. ಸೋಲು ಸ್ಪಷ್ಟವಾಗಿದೆ ಎಂಬುದು ಖಚಿತವಾಗುತ್ತಿದ್ದಂತೆ ಮೋದಿ ಹತಾಶರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಯಾನಕ ಸುಳ್ಳುಗಳನ್ನು ಹೇಳುತ್ತಾ ದೇಶದ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.
ಗೋಕಾಕ್ ಪಟ್ಟಣದಲ್ಲಿಂದು 'ಪ್ರಜಾಧ್ವನಿ-2' ಮತಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಅವರು ಮತಯಾಚಿಸಿದರು.
ಬೆಲೆ ಏರಿಕೆ, ನಿರುದ್ಯೋಗದ ಬಗ್ಗೆ ಮೋದಿ ಮಾಡನಾಡುವುದಿಲ್ಲ. 2014 ಹಾಗೂ 2019ರಲ್ಲಿ ಭಾರತೀಯರಲ್ಲಿ ಭ್ರಮೆ ಹುಟ್ಟಿಸಿ ಅಧಿಕಾರಕ್ಕೆ ಬಂದರು. ಒಂದೇ ಒಂದು ಭರವಸೆಗಳನ್ನೂ ಈವರೆಗೆ ಈಡೇರಿಸಿಲ್ಲ. ಪ್ರತಿ ಬಾರಿ ಕೇವಲ ಭಾವನಾತ್ಮಕವಾಗಿ ಜನರನ್ನು ಪ್ರಚೋದಿಸುವಂತೆ ಸುಳ್ಳುಗಳನ್ನು ಹೇಳುತ್ತಲೇ ಇದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ದಲಿತರು, ಹಿಂದುಳಿದವರಿಗೆ ನೀಡಿದ ಮೀಸಲಾತಿಯನ್ನು ಕಿತ್ತು ಮುಸಲ್ಮಾನರಿಗೆ ನೀಡಲಿದೆ ಎಂದು ಬಿಜೆಪಿ ನಾಯಕರು ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಎಂದಿಗೂ ಸಂವಿಧಾನಕ್ಕೆ ವಿರುದ್ಧವಾಗಿ ಕೆಲಸ ಮಾಡುವುದಿಲ್ಲ. ನಮ್ಮ ಪಕ್ಷ ಸಾಮಾಜಿಕ ನ್ಯಾಯದ ಪರ ಎನ್ನುವುದು ಇಡೀ ವಿಶ್ವಕ್ಕೆ ಗೊತ್ತಿದೆ ಎಂದು ತಿರುಗೇಟು ಕೊಟ್ಟರು.
ಸರ್ಕಾರಿ ನೌಕರರ ಸಂಬಳವನ್ನು ಎಂದಿಗೂ ನಿಲ್ಲಿಸಿಲ್ಲ: ಸರ್ಕಾರಿ ಅಧಿಕಾರಿಗಳಿಗೆ ಸಂಬಳ ಕೊಡಲು ದುಡ್ಡಿಲ್ಲ. ಕರ್ನಾಟಕ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬುದೆಲ್ಲ ಅಪ್ಪಟ ಸುಳ್ಳು. ನಾವು ಸರ್ಕಾರಿ ನೌಕರರ ಸಂಬಳವನ್ನು ಎಂದಿಗೂ ನಿಲ್ಲಿಸಿಲ್ಲ. ಅಭಿವೃದ್ಧಿ ಜೊತೆಗೆ ಐದು ಗ್ಯಾರಂಟಿಗಳನ್ನೂ ಈಡೇರಿಸಿದ್ದೇವೆ. ಗ್ಯಾರಂಟಿಗಳಿಗೆ 52,009 ಕೋಟಿ ಮತ್ತು 1,20,000 ಕೋಟಿ ರೂ ಅಭಿವೃದ್ಧಿಗೆ ನೀಡಿದ್ದೇವೆ. ಅನ್ನಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಶಕ್ತಿ ಹಾಗೂ ಯುವನಿಧಿ ಗ್ಯಾರಂಟಿಗಳನ್ನು ಜನರಿಗೆ ನೀಡಿದ್ದೇವೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 72 ಸಾವಿರ ಕೋಟಿ ರೂ ರೈತರ ಸಾಲ ಮನ್ನಾ ಮಾಡಿದ್ದಾರೆ. ರಾಜ್ಯದಲ್ಲಿ ನಾನು ಸಿಎಂ ಆಗಿದ್ದಾಗ 27.20 ಲಕ್ಷ ರೈತರಿಗೆ 8,165 ಕೋಟಿ ರೂ. ಸಾಲ ಮನ್ನಾ ಮಾಡಿದ್ದೇನೆ. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ ಮನ್ನಾ ಮಾಡುವಂತೆ ನಾವು ಹೋರಾಟ ನಡೆಸಿದ್ದೆವು. ಆಗ ಅವರು ನಮ್ಮ ಬಳಿ ನೋಟ್ ಪ್ರಿಂಟ್ ಮಾಡುವ ಮಷೀನ್ ಇಲ್ಲ ಎಂದು ರೈತರನ್ನು ಅವಮಾನಿಸಿದ್ದರು ಎಂದು ಟೀಕಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಹಿಂದುಳಿದ ಸಮುದಾಯದ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಪಕ್ಷ ಎರಡನೇ ಬಾರಿಗೆ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಪೂರ್ಣ ಬಹುಮತದ ಸರ್ಕಾರವನ್ನು ಬೀಳಿಸುವುದು ಅಷ್ಟು ಸುಲಭ ಅಲ್ಲ. ಪದೇ ಪದೇ ಲೋಕಸಭಾ ಚುನಾವಣೆ ನಂತರ ಸರ್ಕಾರವನ್ನು ಬೀಳಿಸುವುದಾಗಿ ಹೇಳುತ್ತಿದ್ದೀರಿ. ಸರ್ಕಾರ ಕೆಡವಲು ನಿಮಗೇನು ನೈತಿಕತೆ ಇದೆ? ಸರ್ಕಾರವನ್ನು ಕೆಡವಲು ಮುಂದಾದರೆ ಇಡೀ ಹಿಂದುಳಿದ ವರ್ಗಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಚಿವ ಸತೀಶ್ ಜಾರಕಿಹೊಳಿ, ಡಾ.ಎಂ.ಸಿ.ಸುಧಾಕರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕ ವಿ.ಕೆ.ಸಂಗಮೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ನವಲಗಟ್ಟಿ, ಮುಖಂಡರಾದ ಡಾ.ಮಹಾಂತೇಶ್ ಕಡಾಡಿ, ಅಶೋಕ್ ಪೂಜಾರಿ, ಚಂದ್ರಶೇಖರ್ ಕೊಣ್ಣೂರು, ಅರವಿಂದ ದಳವಾಯಿ ಸೇರಿ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.
ಇದನ್ನೂ ಓದಿ: ವಿಜಯ್ ಮಲ್ಯ, ಕ್ಯಾಪ್ಟನ್ ಗೋಪಿನಾಥ್ ವಿರುದ್ಧ ಎಸ್‌ಎಫ್‌ಐಒ ತನಿಖೆ ರದ್ದುಗೊಳಿಸಿದ ಹೈಕೋರ್ಟ್ - High Court